ಸಾರಾಂಶ
ಇದೇ ವೇಳೆ ಪ್ರೇಮಕವಿ ಬಿ.ಆರ್. ಲಕ್ಷ್ಮಣ ರಾವ್, ಹಿರಿಯ ಯಕ್ಷಗಾನ ಕಲಾವಿದ ಡಾ.ನಾ. ದಾಮೋದರ ಶೆಟ್ಟಿ ಅವರಿಗೆ ಕಾವ್ಯಾಶ್ರೀ ಪ್ರಶಸ್ತಿ, ರತ್ನವಾಲಾ ಪ್ರಕಾಶ್ ಮತ್ತು ಕೆ.ಎಸ್. ಸುರೇಖಾ ಅವರಿಗೆ ಭಾವಶ್ರೀ ಪ್ರಶಸ್ತಿಯನ್ನು ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಪ್ರದಾನ ಮಾಡುವರು
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಯೋಗದಲ್ಲಿ ಆ.2 ಮತ್ತು 3 ರಂದು ಗೀತೋತ್ಸವ- 2025 ಎಂಬ 19ನೇ ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನವನ್ನು ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಅತಿಥೇಯ ಸಮಿತಿ ಅಧ್ಯಕ್ಷ ಮತ್ತು ಪ್ರಧಾನ ಸಂಚಾಲಕ ನಾಗರಾಜ ವಿ. ಬೈರಿ ತಿಳಿಸಿದರು.ಈ ಸಮ್ಮೇಳನವನ್ನು ಆ.2ರ ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸುವರು. ಕವಿ ನಗರ ಶ್ರೀನಿವಾಸ ಉಡುಪ ಅವರು ಸಮ್ಮೇಳನಾಧ್ಯಕ್ಷರಾಗಿದ್ದು, ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಅಧ್ಯಕ್ಷತೆ ವಹಿಸುವರು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಇದೇ ವೇಳೆ ಪ್ರೇಮಕವಿ ಬಿ.ಆರ್. ಲಕ್ಷ್ಮಣ ರಾವ್, ಹಿರಿಯ ಯಕ್ಷಗಾನ ಕಲಾವಿದ ಡಾ.ನಾ. ದಾಮೋದರ ಶೆಟ್ಟಿ ಅವರಿಗೆ ಕಾವ್ಯಾಶ್ರೀ ಪ್ರಶಸ್ತಿ, ರತ್ನವಾಲಾ ಪ್ರಕಾಶ್ ಮತ್ತು ಕೆ.ಎಸ್. ಸುರೇಖಾ ಅವರಿಗೆ ಭಾವಶ್ರೀ ಪ್ರಶಸ್ತಿಯನ್ನು ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಪ್ರದಾನ ಮಾಡುವರು ಎಂದರು.ಮಧ್ಯಾಹ್ನ 12ಕ್ಕೆ ಮೈಸೂರಿನ ಕಲಾವಿದರಿಂದ ಭಾವ ಕುಸುಮ ಸಮೂಹ ಗಾಯನ, 12.30ಕ್ಕೆ ಶಿವಮೊಗ್ಗ, ದಾವಣಗೆರೆ, ಶಿರಸಿ, ಚಾಮರಾಜನಗರ, ಕಾಸರಗೋಡು, ಮಂಡ್ಯ, ಹಾಸನಯ ಕಲಾವಿದರು ಭಾವಾಂಜಲಿ ಸಮೂಹ ಗಾಯನ ನಡೆಸಿಕೊಡುವರು. ಮಧ್ಯಾಹ್ನ 3ಕ್ಕೆ ತತ್ವಪದ ಗಾಯನ ನಡೆಸಲಿದ್ದಾರೆ. ಸಂಜೆ 4ಕ್ಕೆ ಕವಿಯ ನೋಡಿ ಕವಿತೆ ಕೇಳಿ, ಸಂಜೆ 5ಕ್ಕೆ ಕವಿ ಚಿತ್ರಗೀತೆಗಳು ಹಾಗೂ ಸಂಜೆ 6ಕ್ಕೆ ಸಮ್ಮೇಳನಾಧ್ಯಕ್ಷರ ಗಾಯನದೊಂದಿಗೆ ಗೀತ ಸಂಗೀತ ಜರುಗಲಿದೆ ಎಂದು ಅವರು ವಿವರಿಸಿದರು.ಆ.3ರ ಬೆಳಗ್ಗೆ 10ಕ್ಕೆ ನವ ಅನ್ವೇಷಣೆ, 11ಕ್ಕೆ ನವ್ಯ- ನವೋದಯ ಕವಿ ಗೀತೆಗಳು, ಮಧ್ಯಾಹ್ನ 12ಕ್ಕೆ ರಾಗಾಧಾರಿತ ಗೀತೆಗಳು, 3ಕ್ಕೆ ಕವಿ ಎಂ.ಎನ್. ವ್ಯಾಸರಾವ್ ರಚಿತ ಗೀತ ನೃತ್ಯ ಪ್ರದರ್ಶನ, ಸಂಜೆ 4.30ಕ್ಕೆ ಸಂಸ್ಮರಣೆ, 5.30ಕ್ಕೆ ನಾಡೋಜ ಡಾ. ಹಂಪ ನಾಗರಾಜಯ್ಯ ಸಮಾರೋಪ ಭಾಷಣ ಮಾಡುವರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಡಾ. ಸಿಪಿಕೆ ಅತಿಥಿಯಾಗುವರು. ಇದಾದ ಬಳಿಕ ಒಂದು ಸಾಲಿನ ಕವಿತೆ, ಗೀತ-ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪರಿಷತ್ತಿನ ಕಾರ್ಯದರ್ಶಿ ಸಿರಿ ಬಾಬು, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಎನ್. ಬೆಟ್ಟೇಗೌಡ, ಅಜಯ್ ಶಾಸ್ತ್ರಿ ಮೊದಲಾದವರು ಇದ್ದರು.