ಸಾರಾಂಶ
ಗೋಕರ್ಣದ ವಿವಿಧ ಹೋಂಸ್ಟೇ ಹಾಗೂ ವಸತಿಗೃಹ, ಕಡಲತೀರದಲ್ಲಿ ಹೋಟೆಲ್, ರೆಸಾರ್ಟ್‌ಗಳಿಗೆ ಗೋಕರ್ಣ ಪೊಲೀಸ್ ಠಾಣೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹಲವೆಡೆ ಸ್ವತಃ ಪೊಲೀಸ್ ಅಧಿಕಾರಿಗಳು ಪ್ರವಾಸಿಗರ ಸುರಕ್ಷತೆ ಕುರಿತು ಮಾಹಿತಿ ಫಲಕ ಅಳವಡಿಸಿದರು.
ಗೋಕರ್ಣ: ಇಲ್ಲಿಯ ವಿವಿಧ ಹೋಂಸ್ಟೇ ಹಾಗೂ ವಸತಿಗೃಹ, ಕಡಲತೀರದಲ್ಲಿ ಹೋಟೆಲ್, ರೆಸಾರ್ಟ್‌ಗಳಿಗೆ ಗೋಕರ್ಣ ಪೊಲೀಸ್ ಠಾಣೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪ್ರವಾಸಿಗರಿಗೆ ಸಮುದ್ರಕ್ಕಿಳಿಯದಂತೆ ತಿಳಿ ಹೇಳುವುದು, ಅಪಾಯಕಾರಿ ಸ್ಥಳಕ್ಕೆ ತೆರಳದಂತೆ ಸೂಚಿಸುವುದು ಮತ್ತಿತರ ಸುರಕ್ಷತಾ ಕ್ರಮದ ಬಗ್ಗೆ ಮಾಲೀಕರಿಗೆ ತಿಳಿಹೇಳಿದರು.ಅಲ್ಲದೇ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಬರುವ ಪ್ರವಾಸಿಗರ ದಾಖಲಾತಿ ಪಡೆದು ರಿಜಿಸ್ಟರ್‌ನಲ್ಲಿ ದಾಖಲಿರುವ ಬಗ್ಗೆ ಹಾಗೂ ಸಿಸಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೆ ಎಂದು ಪರಿಶೀಲನೆ ನಡೆಸಿದರು.
ಬಳಿಕ ರೆಸಾರ್ಟ್, ವಸತಿಗೃಹದ ಮುಂಭಾಗದಲ್ಲಿ ರಸ್ತೆಗೆ ಮುಖ ಮಾಡಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಿ, ವಸತಿಗೃಹ ಪಡೆಯಲು ಬರುವ ಪ್ರವಾಸಿಗರ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆದು ದಾಖಲಿಸುವಂತೆ ಖಡಕ್ ಸೂಚನೆ ನೀಡಿದರು. ಅಗತ್ಯವಿದ್ದಾಗ ಪೊಲೀಸರು ತಪಾಸಣೆ ನಡೆಸಿದಾಗ ಸರಿಯಾದ ಮಾಹಿತಿ ದೊರೆಯುವಂತೆ ಇರಬೇಕು, ನಿಯಮ ಮೀರಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.ಅನುಮಾನ ಕಂಡುಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ, ಪೊಲೀಸ್ ಕಂಟ್ರೋಲ್ ರೂಂ ೧೧೨ ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಯಿತು.
ಪಿಐ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ನಡೆದ ಈ ಪರಿಶೀಲನೆ ಕಾರ್ಯದಲ್ಲಿ ಪಿಎಸ್‌ಐ ಖಾದರ ಬಾಷಾ ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.ಎಲ್ಲಿ ಪರಿಶೀಲನೆ?: ಗೋಕರ್ಣ ಸಮೀಪದ ಭಾವಿಕೊಡ್ಲ, ದುಬ್ಬನಶಸಿ, ಮುಖ್ಯಕಡಲತೀರ, ಓಂ, ಕುಡ್ಲೆ ಹಾಗೂ ಗೋಕರ್ಣ ಪೇಟೆ ಭಾಗದ ವಸತಿಗೃಹಗಳ ಪರಿಶೀಲನೆ ನಡೆಸಲಾಯಿತು. ಹಲವೆಡೆ ಸ್ವತಃ ಪೊಲೀಸ್ ಅಧಿಕಾರಿಗಳು ಪ್ರವಾಸಿಗರ ಸುರಕ್ಷತೆ ಕುರಿತು ಮಾಹಿತಿ ಫಲಕ ಅಳವಡಿಸಿದರು.