ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಪಿತೂರಿ: ಡಿ.ಕೆ. ಶಿವಕುಮಾರ್‌

| Published : Jan 19 2025, 02:18 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.ಬೆಳಗಾವಿಯ ಸುವರ್ಣಸೌಧ ಗಾಂಧಿ ಪ್ರತಿಮೆ ಬಳಿ ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಡಾ ಪ್ರಕರಣದ ಕುರಿತು ಇ.ಡಿ ಸುದೀರ್ಘ ತನಿಖೆ ನಡೆಸಿದೆ. ಇಲ್ಲಿ ಅಕ್ರಮ ನಡೆದಿದೆಯೋ ಇಲ್ಲವೋ ಎಂದು ನ್ಯಾಯಾಲಯ ವಿಚಾರಣೆ ಮಾಡಬೇಕೇ ಹೊರತು, ನೀವು, ನಾನು ವಿಚಾರಣೆ ಮಾಡುವಂತಹದಲ್ಲ ಎಂದು ಹೇಳಿದರು.

ನಾನು ಇಡಿ ತನಿಖೆ ನೋಡಿದ್ದೇನೆ. ಈ ಪ್ರಕರಣದ ಬಗ್ಗೆ ನಾನು ಹೆಚ್ಚಿಗೆ ಏನೂ ಹೇಳಲ್ಲ. ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ಮುಖ್ಯಮಂತ್ರಿಗಳಾಗಲಿ, ಅವರ ಧರ್ಮಪತ್ನಿಯಾಗಲಿ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಈ ವಿಚಾರ ಬಿಟ್ಟು ರಾಜ್ಯದ ವಿಚಾರದ ಬಗ್ಗೆ ಗಮನಹರಿಸಬೇಕು ಎಂದರು.

ಬೆಳಗಾವಿ ಸುವರ್ಣಸೌಧ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಎಲ್ಲ ಪಕ್ಷದ ಶಾಸಕರ ಜತೆಗೆ ಸ್ವಾತಂತ್ರ್ಯ ಹೋರಾಟಗಾರರಿಗೂ ಆಹ್ವಾನ ನೀಡಲಾಗುವುದು. ಇದರ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಲಾಗಿದೆ ಎಂದರು.

ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಉಪಸ್ಥಿತಿಯಲ್ಲಿ ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಮೆ ಅನಾವರಣ ಮಾಡಲಿದ್ದಾರೆ. ವಿಧಾನಸಭೆ ಸ್ಪೀಕರ್ ಹಾಗೂ ಪರಿಷತ್ತಿನ ಸಭಾಪತಿಗಳು ಭಾಗವಹಿಸಲಿದ್ದಾರೆ. ಎಲ್ಲಾ ಪಕ್ಷದ ಶಾಸಕರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದ ನಂತರ ನೆನಪಿಗಾಗಿ ಎಲ್ಲಾ ಶಾಸಕರ ಗುಂಪು ಫೋಟೋ ತೆಗೆಯಲಾಗುವುದು. ನಂತರ ಅತಿಥಿಗಳು ಹಾಗೂ ಆಹ್ವಾನಿತರಿಗೆ ಮುಖ್ಯಮಂತ್ರಿಗಳು ಭೋಜನಕೂಟ ಏರ್ಪಡಿಸಿದ್ದಾರೆ. ಶಾಸಕರ ಹೊರತಾಗಿ ಗಂಗಾಧರ ದೇಶಪಾಂಡೆ ಅವರ ಕುಟುಂಬ ಸೇರಿದಂತೆ ಪ್ರಮುಖ ಕುಟುಂಬದವರಿಗೂ ಆಹ್ವಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.