ಕ್ರೀಡಾ ಪ್ರದರ್ಶನ ನೋಡಿ ಕ್ರೀಡಾಪಟುಗಳನ್ನು ಉತ್ತೇಜಿಸಿ: ಡಿಸಿ ಡಾ. ವಿದ್ಯಾ ಕುಮಾರಿ ಕರೆ

| Published : Jan 19 2025, 02:18 AM IST

ಕ್ರೀಡಾ ಪ್ರದರ್ಶನ ನೋಡಿ ಕ್ರೀಡಾಪಟುಗಳನ್ನು ಉತ್ತೇಜಿಸಿ: ಡಿಸಿ ಡಾ. ವಿದ್ಯಾ ಕುಮಾರಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಕರ್ನಾಟಕ ಕ್ರೀಡಾಕೂಟ-2025ರ ಸಮಾರೋಪ ಸಮಾರಂಭದ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿದರು.

ಕರ್ನಾಟಕ ಕ್ರೀಡಾಕೂಟ ಸಮಾರೋಪದ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಮಣಿಪಾಲನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಹಾಗೂ ಮಾಹೆ ವಿ.ವಿ.ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಕ್ರೀಡಾಪಟುಗಳ ಕ್ರೀಡಾ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸುವುದರೊಂದಿಗೆ ಕ್ರೀಡಾಪಟುಗಳನ್ನು ಉತ್ತೇಜಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ಕರೆ ನೀಡಿದರು.ಅವರು ಇಲ್ಲಿನ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಕರ್ನಾಟಕ ಕ್ರೀಡಾಕೂಟ-2025ರ ಸಮಾರೋಪ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಕರ್ನಾಟಕ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಕ್ರೀಡೆಗಳ ಅತ್ಯುತ್ತಮ ಕ್ರೀಡಾಪಟುಗಳು, ತಂಡಗಳು ಭಾಗವಹಿಸುತ್ತಿದೆ. ಕ್ರೀಡಾ ಸ್ಪರ್ಧೆಗಳನ್ನು ವೀಕ್ಷಿಸಲು ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಜಿಲ್ಲೆಯ ಕ್ರೀಡಾಭಿಮಾನಿಗಳು, ಕ್ರೀಡಾ ಪಟುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದರು.ಈ ಕ್ರೀಡಾಕೂಟದ ಸಮಾರೋಪ ಸಮಾರಂಭವು ಜ.23ರಂದು ಸಂಜೆ 5 ಗಂಟೆಗೆ ನಗರದ ಅಜ್ಜರಕಾಡುವಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ವಿವಿಧ ಸಚಿವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿಯೂ ಸಹ ಹೆಚ್ಚಿನ ಜನರು ಭಾಗವಹಿಸಬೇಕು ಎಂದು ಹೇಳಿದರು.ರಾಜ್ಯ ಸರ್ಕಾರದ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಶೇ.3ರಷ್ಟು ಹಾಗೂ ಇತರೆ ಇಲಾಖೆಗಳಲ್ಲಿ ನೇಮಕಾತಿಯ ಸಂದರ್ಭದಲ್ಲಿ ಶೇ.2ರಷ್ಟು ಉದ್ಯೋಗ ಮೀಸಲಾತಿಯನ್ನು ಕ್ರೀಡಾಪಟುಗಳಿಗೆ ನೀಡಲು ನಿರ್ಧರಿಸಿದ್ದು, ಹೆತ್ತವರು ತಮ್ಮ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು ಎಂದರು.ರಾಜ್ಯ ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್. ಮಾತನಾಡಿ, ಕರ್ನಾಟಕ ಕ್ರೀಡಾಕೂಟದ ಸಮಾರೋಪ ಸಮಾರಂಭವು ಅದ್ಧೂರಿಯಾಗಿ ನಡೆಯುತ್ತಿದ್ದು, ಆಳ್ವಾಸ್ ವಿರಾಸತ್‌ನ ವಿದ್ಯಾರ್ಥಿಗಳ ತಂಡದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸೌಂಡ್‌ ಆ್ಯಂಡ್‌ ಲೈಟ್ಸ್ ಕಾರ್ಯಕ್ರಮ ಸಹ ಅಂದು ಸಂಜೆ ನಡೆಯಲಿದೆ ಎಂದು ತಿಳಿಸಿದರು.ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಎಸ್ಪಿ ಸಿದ್ಧಲಿಂಗಪ್ಪ, ನಗರಸಭೆ ಪೌರಾಯುಕ್ತ ಡಾ. ಉದಯ್ ಕುಮಾರ್ ಶೆಟ್ಟಿ, ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅನುಷ್ಟಣಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.