ರಾಜಕಾರಣ ಯಾರ ಮನೆಯ ಸ್ವತ್ತಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

| Published : Jul 12 2024, 01:36 AM IST

ರಾಜಕಾರಣ ಯಾರ ಮನೆಯ ಸ್ವತ್ತಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕಾಕ : ರಾಜಕಾರಣ ಯಾರ ಮನೆಯ ಸ್ವತ್ತಲ್ಲ, ಇಂದು ನಮ್ಮ ದಾಗಿರುತ್ತದೆ, ನಾಳೆ ಬೇರೆಯವರದಾಗಿರುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ರಾಜಕಾರಣ ಯಾರ ಮನೆಯ ಸ್ವತ್ತಲ್ಲ, ಇಂದು ನಮ್ಮ ದಾಗಿರುತ್ತದೆ, ನಾಳೆ ಬೇರೆಯವರದಾಗಿರುತ್ತದೆ. ಗೆದ್ದಾಗ ಬೀಗುವುದು, ಸೋತಾಗ ಕುಗ್ಗುವುದು ಮನುಷ್ಯನ ಸಹಜವಾದ ಸ್ವಭಾವ. ಆದರೆ, ಸೋಲು-ಗೆಲವು ಯಾವುದೂ ಶಾಶ್ವತವಲ್ಲ ಎನ್ನುವ ಮಂತ್ರ ಸದಾ ನಮ್ಮ ಮನಸಿನಲ್ಲಿ ಜಾಗೃತವಾಗಿರಬೇಕು. ನಾವು ಪ್ರತಿ ಬಾರಿ ಸೋತಾಗಲೂ ಒಂದು ಅನುಭವದ ಪಾಠವನ್ನಂತೂ ಖಂಡಿತ ಕಲಿಯುತ್ತೇವೆ. ಅದನ್ನು ನನ್ನ ಮಗನಿಗೆ ಹೇಳಿಕೊಟ್ಟಿದ್ದೇನೆ. ನಿರಂತರವಾಗಿ ನಿಮ್ಮ ಸೇವೆ ಮಾಡಲು ನಾವು ಸದಾಸಿದ್ಧ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಗುರುವಾರ ನಗರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಿದ ಗೋಕಾಕ ಮತ್ತು ಅರಭಾವಿ ವಿಧಾನಸಭೆ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಿಜೆಪಿಯವರೇ, ಬೆಳಗಾವಿಗೆ ಅನ್ಯಾಯ ಮಾಡಿದವರಿಗೆ ಮತ ನೀಡೋದಿಲ್ಲ, ಕಾಂಗ್ರೆಸ್‌ಗೆ ಮತ ನೀಡುತ್ತೇವೆ ಎಂದು ಹೇಳುತ್ತಿದ್ದರು. ಆದರೂ ನಮಗೆ ಸೋಲಾಗಿದ್ದು ಯಾವ ಕಾರಣಕ್ಕೆ ಗೊತ್ತಿಲ್ಲ. ಆ ಕಾರಣವನ್ನು ನಾನು ಹುಡುಕುತ್ತಿದ್ದೇನೆ. ನೇಹಾ ಹತ್ಯೆಯಾಗಿರಬಹುದು, ಮೋದಿ ಅಲ್ಲೆ ಇರಬಹುದು. ಹಲವು ಕಾರಣಗಳಿಂದ ನಾವು ಸೋತಿರಬಹುದು. ಆದರೆ ಇದನ್ನು ನಾನು ಚಾಲೆಂಜ್ ಆಗಿ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದೆ ಒಳ್ಳೆಯ ದಿನಗಳು ಬರಲಿವೆ. ಜನ ಮನಸ್ಸು ಮಾಡಿದರೆ ಮನೆಯಲ್ಲಿ ಕೂರಿಸುತ್ತಾರೆ. ಮನಸ್ಸು ಮಾಡಿದರೆ ಗೆಲ್ಲಿಸುತ್ತಾರೆ. ಸೋಲು ಮತ್ತು ಗೆಲುವು ಪ್ರಜಾತಂತ್ರದಲ್ಲಿ ನಿರಂತರ ಪ್ರಕ್ರಿಯೆ. ಮುಂದೆ ಹೋರಾಟ ಮಾಡಿ ಗೆಲ್ಲೋಣ ಎಂದ ಅವರು, ಸತೀಶ ಜಾರಕಿಹೊಳಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಪಡೆದ ಮತಗಳಿಗಿಂದ ಮೃಣಾಲ್‌ ಹೆಬ್ಬಾಳಕರ ಅವರಿಗೆ ಹೆಚ್ಚು ಮತಗಳನ್ನು ನೀಡಿದ್ದಾರೆ. ಗೋಕಾಕದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ 59 ಸಾವಿರ ಮತ ನೀಡಿದ್ದರು, ಈಗ ಮೃಣಾಲ್‌ಗೆ 83 ಸಾವಿರ ಮತ ಬಂದಿವೆ ಎಂದ ಅವರು, ಮತ್ತೆ ಸಂಘಟಿತರಾಗೋಣ, ಸಂಘಟನೆ ಗಟ್ಟಿಮಾಡೋಣ ಎಂದು ಹೇಳಿದರು.

ಮೃಣಾಲ್‌ ಹೆಬ್ಬಾಳಕರ ಮಾತನಾಡಿ, ಚುನಾವಣೆಯಲ್ಲಿ ಸೋಲಾಗಿದೆ, ಜನಸೇವೆಯಲ್ಲಿ ಸೋಲಾಗಿಲ್ಲ. ಬರುವ ಜಿಪಂ, ತಾಪಂ ಚುನಾವಣೆಗಳಲ್ಲಿ ನಿಮ್ಮ ಪರವಾಗಿ ನಿಂತು ಪಕ್ಷ ಗಟ್ಟಿಗೊಳಿಸುವ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅರಭಾವಿ ಮತ್ತು ಗೋಕಾಕ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.