ಹವಾಮಾನ ವೈಪರಿತ್ಯದಿಂದ ತೊಂದರೆಗೆ ಒಳಗಾಗುವ ಬಡವರು, ಕೂಲಿಕಾರ್ಮಿಕರು, ರೈತರು ಅದನ್ನು ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕಾಗಿದೆ. ಅದಕ್ಕಾಗಿ ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹವಾಮಾನ ವೈಪರಿತ್ಯದಿಂದ ಗ್ರಾಮೀಣ ಪ್ರದೇಶದ ಬಡವರು, ರೈತರು, ಕೂಲಿಕಾರ್ಮಿಕರು ಹೆಚ್ಚು ತೊಂದರೆ ಅನುಭವಿಸುವಂತಾಗಿದೆ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ವಿಷಾದಿಸಿದರು.

ತಾಲೂಕಿನ ಚಿನಕುರಳಿ ಗ್ರಾಪಂ ಆವರಣದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಗ್ರಾಪಂ ಸದಸ್ಯರು, ಅಧಿಕಾರಿಗಳು ಮತ್ತು ಸಮುದಾಯದ ಮುಂಚೂಣಿ ಕಾರ್‍ಯಕರ್ತರೊಂದಿಗೆ ‘ಪಂಚಾಯಿತ್ ಸಮ್ಮೇಳನ, ಹವಾಮಾನ ಬದಲಾವಣೆ ಪರಿಣಾಮ ತಡೆಗಟ್ಟುವಲ್ಲಿ ಗ್ರಾಪಂ ಮತ್ತು ಸಮುದಾಯದ ಪಾತ್ರ’ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹವಾಮಾನ ವೈಪರಿತ್ಯದಿಂದ ತೊಂದರೆಗೆ ಒಳಗಾಗುವ ಬಡವರು, ಕೂಲಿಕಾರ್ಮಿಕರು, ರೈತರು ಅದನ್ನು ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕಾಗಿದೆ. ಅದಕ್ಕಾಗಿ ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಹವಾಮಾನ ವೈಪರಿತ್ಯದ ಬಗ್ಗೆ ಸಂಶೋದಕರು, ವಿಜ್ಞಾನಿಗಳು ಮಾತ್ರ ಮಾತನಾಡುತ್ತಿದ್ದರು. ಇದೀಗ ಪ್ರತಿಯೊಬ್ಬರೂ ಮಾತನಾಡುವಂತಾಗಿದೆ. ಮೊದಲು ನಾವು ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು ವೈಪರಿತ್ಯ ತಡೆಗಟ್ಟುವ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.

ಹವಾಮಾನ ವೈಪರಿತ್ಯ ತಡೆಯಲು ಗ್ರಾಪಂ ಮಟ್ಟದಲ್ಲಿ ಆಡಳಿತ ಸುಧಾರಣೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕಾರ್‍ಯಕ್ರಮ, ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ಹೇಗೆ, ಕಸ ವಿಲೇವಾರಿ ಮಾಡಿ ಹಸಿ- ಒಣ ಬೇರ್ಪಡಿಸುವುದರ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು, ತಾಲೂಕಿನ 24 ಗ್ರಾಪಂಗಳಲ್ಲೂ ಈ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 12 ಹಾಗೂ ಎರಡನೇ ಹಂತದಲ್ಲಿ 12 ಗ್ರಾಪಂಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮನ್ನುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಎದುರಾಗುತ್ತಿರುವ ಹವಾಮಾನ ವೈಪರಿತ್ಯಕ್ಕೆ ಮನುಷ್ಯರ ದುರಾಸೆಯೇ ಕಾರಣ. ಗ್ರಾಮೀಣ ಪ್ರದೇಶಕ್ಕಿಂತ ಹೆಚ್ಚಾಗಿ ನಗರ ಪ್ರದೇಶದಲ್ಲಿ ಪರಿಸರ ಮತ್ತು ವಾಯು ಮಾಲಿನ್ಯ ಹೆಚ್ಚಾಗಿದೆ. ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ನಿಲ್ಲಿಸಬೇಕು ಎಂದರು.

ಚಿನಕುರಳಿ ಗ್ರಾಪಂನಲ್ಲಿ ಕುಡಿಯುವ ನೀರಿಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಗಾಜಿನ ಲೋಟಗಳಲ್ಲಿ ನೀರು ಕುಡಿಯುವ ಮೂಲಕ ಅರಿವು ಮೂಡಿಸುತ್ತಿದ್ದೇವೆ. ಶಾಸಕರು ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಪ್ಲಾಸ್ಟಿಕ್ ಬಾಟಲುಗಳಲ್ಲಿ ನೀರು ಕುಡಿಯುವುದನ್ನು ಸ್ಥಗಿತಗೊಳಿಸಬೇಕೆಂದು ಮನವಿ ಮಾಡಿದರು.

ಸಂಪನ್ಮೂಲ ವ್ಯಕ್ತಿ ಲಿಂಗದೇವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಹವಾಮಾನ ಬದಲಾದಂತೆ ಮನುಷ್ಯರ ಜೀವನ ಶೈಲಿ, ಬೆಳೆಗಳ ರೂಪುರೇಷೆಗಳು, ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದರು.

ಮಳೆ ಬೀಳುವ ಕಾಲ ಬದಲಾಗಿದೆ. ತೀವ್ರ ತರ ಆರೋಗ್ಯ ಸಮಸ್ಯೆ ಜನರು, ಪ್ರಾಣಿಗಳಲ್ಲಿ ಉಲ್ಬಣಗೊಂಡಿದೆ. ಹಾಗಾಗಿ ಗ್ರಾಮ ಮಟ್ಟದಲ್ಲಿಯೇ ಹವಾಮಾನ ವೈಪರಿತ್ಯ ತಡೆಗಟ್ಟುವ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಬೇಕಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷ ನರಸಿಂಗಶೆಟ್ಟಿ, ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಪಿಡಿಒ ಆರತಿಕುಮಾರಿ ಸೇರಿದಂತೆ ಗ್ರಾಪಂನ ಎಲ್ಲಾ ಸದಸ್ಯರು ಹಾಜರಿದ್ದರು.