ಜಿಲ್ಲಾ ಅಕ್ಕ ಪಡೆಯಿಂದ ಹರಿಹರ ತಾಲೂಕಿನ ಮಲೇಬೆನ್ನೂರು, ಕೊಕ್ಕನೂರಲ್ಲಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ರಾಜ್ಯಾದ್ಯಂತ ಜಾರಿಗೆ ತಂದಿರುವ ನೂತನ “ಅಕ್ಕ ಪಡೆ“ಯಿಂದ ಅಕ್ಕಪಡೆಯ ಉಪಯೋಗ, ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
- ಮಲೇಬೆನ್ನೂರು, ಕೊಕ್ಕನೂರಿನಲ್ಲಿ ಕಾರ್ಯಕ್ರಮ । ಅಕ್ಕಪಡೆ ಸದ್ಬಳಕೆಗೆ ಮಾರ್ಗದರ್ಶನ
- - -ಕನ್ನಡಪ್ರಭ ವಾರ್ತೆ ಹರಿಹರ
ಜಿಲ್ಲಾ ಅಕ್ಕ ಪಡೆಯಿಂದ ಹರಿಹರ ತಾಲೂಕಿನ ಮಲೇಬೆನ್ನೂರು, ಕೊಕ್ಕನೂರಲ್ಲಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ರಾಜ್ಯಾದ್ಯಂತ ಜಾರಿಗೆ ತಂದಿರುವ ನೂತನ “ಅಕ್ಕ ಪಡೆ“ಯಿಂದ ಅಕ್ಕಪಡೆಯ ಉಪಯೋಗ, ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.ತಾಲೂಕಿನ ಮಲೇಬೆನ್ನೂರು ಹಾಗೂ ಕೊಕ್ಕನೂರಿಗೆ ಮಂಗಳವಾರ ಭೇಟಿ ನೀಡಿ, ಮಲೇಬೆನ್ನೂರಿನ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳ, ಕೊಕ್ಕನೂರಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಹಿಳೆಯರಿಗೆ ಅಕ್ಕಪಡೆ ಬಗ್ಗೆ ಮಾಹಿತಿ ನೀಡಿದರು. ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಅಕ್ಕ ಪಡೆಯು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ನಿರ್ದೇಶನದಲ್ಲಿ ಕಾರ್ಯೋನ್ಮುಖವಾಗಿದೆ ಎಂದರು.
ಮಹಿಳಾ ಸಹಾಯವಾಣಿ 181, ಮಕ್ಕಳ ಸಹಾಯವಾಣಿ 1098, ಸೈಬರ್ ಕ್ರೈಂ ಸಹಾಯವಾಣಿ 1930, ತುರ್ತು ಸಹಾಯವಾಣಿ 112ಗಳನ್ನು ಬಳಸುವ ಅವಶ್ಯಕತೆ, ವಿಧಾನ, ಸಿಗುವ ತುರ್ತು ಸೇವೆ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳು ಹಾಗೂ ಅದಕ್ಕಿರುವ ಕಾನೂನು ಕ್ರಮಗಳ ಬಗ್ಗೆ ವಿವರಿಸಿದರು.ಸರಗಳ್ಳತನ ನಡೆದಾಗ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳು, ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳು ಹಾಗೂ ಮಾದಕ ದ್ರವ್ಯಗಳ ಮಾರಾಟ, ಸಾಗಾಟ ಮಾಡುವರ ವಿರುದ್ಧ ಇರುವ ಕಾನೂನು ಕ್ರಮಗಳ ಬಗ್ಗೆ ತಿಳಿಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕೌಟುಂಬಿಕ ದೌರ್ಜನ್ಯಗಳಿಂದ ಸುರಕ್ಷಿತವಾಗಿರಲು ಇರುವ ಕಾನೂನುಗಳ ಬಗ್ಗೆ ಹಾಗೂ ಬಾಲಾಪರಾಧಗಳಿಗೆ ಇರುವ ಕಾನೂನು ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. ಅನಂತರ ಕೊಕ್ಕನೂರು ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಮಹಿಳೆಯರು ಸೇರಿದಂತೆ ಸಾರ್ವಜನಿಕರೊಂದಿಗೆ ಸಭೆ ನಡೆಸಿದರು.ಅನಂತರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಶಾಲಾ ವಿದ್ಯಾರ್ಥಿಗಳಿಗೆ ತುರ್ತು ಸಹಾಯವಾಣಿಗಳ ಬಗ್ಗೆ, ಮಕ್ಕಳ ಸುರಕ್ಷೆ ಬಗ್ಗೆ ಇರುವ ಕಾನೂನುಗಳ ಬಗ್ಗೆ, ಸೈಬರ್ ಅಪರಾಧಗಳಿಂದ ಸುರಕ್ಷತೆ ಬಗ್ಗೆ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಇರಬೇಕಾದ ಸುರಕ್ಷತೆ ಬಗ್ಗೆ, ಸಂಚಾರ ನಿಯಮಗಳ ಪಾಲನೆ, ಶಾಲಾ ಮಕ್ಕಳಿಗೆ ಇರಬೇಕಾದ ಅರಿವುಗಳು ಹಾಗೂ ಶಿಕ್ಷಣದ ಮಹತ್ವ, ಮಾದಕ ದ್ರವ್ಯಗಳ ದುಷ್ಪರಿಣಾಮಗಳು, ಅತಿಯಾದ ಮೊಬೈಲ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಹೆಣ್ಣುಮಕ್ಕಳು ವಿದ್ಯಾಭ್ಯಾಸ, ಉದ್ಯೋಗ ನಿರ್ವಹಿಸುವ ಜಾಗದಲ್ಲಿ ಬರಬಹುದಾದ ತೊಂದರೆಗಳು, ಹೆಣ್ಣುಮಕ್ಕಳು ಬಸ್ ಹಾಗೂ ಇತರೆ ವಾಹನಗಳಲ್ಲಿ ತೆರಳುವಾಗ ಪುಢಾರಿಗಳಿಂದ ತೊಂದರೆ ಕಂಡುಬಂದ ಸಮಯದಲ್ಲಿ ಹೇಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು, ಮಹಿಳಾ ಸಹಾಯವಾಣಿಗಳನ್ನು ಹೇಗೆ ಬಳಸಿಕೊಳ್ಳಬೇಕು, ಅಂತಹವರ ವಿರುದ್ಧ ಹೇಗೆ ಎಚ್ಚೆತ್ತುಕೊಳ್ಳಬೇಕು ಎಂಬುದನ್ನು ಸಹ ತಿಳಿಸಿದರು.ವಿದ್ಯಾರ್ಥಿನಿಯರಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಜಾಗೃತಿ ಮೂಡಿಸಿದ್ದು, ಸ್ವಯಂ ರಕ್ಷಣಾ ಕೌಶಲ್ಯಗಳ ಬಗ್ಗೆ ತಿಳಿಹೇಳಿದರು. ಯಾವುದೇ ತುರ್ತು ಸೇವೆಗಾಗಿ 112ಕ್ಕೆ ಕರೆ ಮಾಡಲು ಹಾಗೂ ಯಾವುದೇ ಸಮಸ್ಯೆಗಳಿದ್ದರೂ ಅಕ್ಕಪಡೆಗೆ ಕರೆ ಮಾಡಿ ತಿಳಿಸುವಂತೆ ಹಾಗೂ ಅಕ್ಕಪಡೆ ಇರುವುದೇ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆಗಾಗಿ ಎಂದು ತಿಳಿಸಿದರು.
- - --13HRR.01 &02:
ಹರಿಹರ ತಾಲೂಕಿನ ಮಲೇಬೆನ್ನೂರು, ಕೊಕ್ಕನೂರಲ್ಲಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಅಕ್ಕಪಡೆಯಿಂದ ಜಾಗೃತಿ ಮೂಡಿಸಲಾಯಿತು.