ಕನ್ನಡಪ್ರಭ ವಾರ್ತೆ ತುಮಕೂರು

ಮಹರ್ಷಿ ವಾಲ್ಮೀಕಿಯಂತೆ ಸಮಾಜದ ಒಳಿತಿಗಾಗಿ ನಮ್ಮಲ್ಲಿ ಸಕಾರಾತ್ಮಕ ಬದಲಾವಣೆ ತಂದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಯೋಜಿಸಲಾಗಿದೆ. ಮಹರ್ಷಿ ವಾಲ್ಮೀಕಿ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೆ, ಅವರ ಜೀವನದ ಆದರ್ಶಗಳನ್ನು ಅರಿತುಕೊಳ್ಳುವ ದಿನವಾಗಿದೆ. ಸಾಮಾನ್ಯ ವ್ಯಕ್ತಿಯಾಗಿದ್ದ ರತ್ನಾಕರರು ಸಕಾರಾತ್ಮಕವಾಗಿ ಬದಲಾವಣೆ ಮಾಡಿಕೊಂಡು ಮಹರ್ಷಿ ವಾಲ್ಮೀಕಿಯಾಗಿ ರೂಪುಗೊಂಡಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಅವರ ಜೀವನದಿಂದ ನಾವು ಉತ್ತಮ ಮೌಲ್ಯಗಳನ್ನು ಕಲಿಯಬೇಕಿದೆ ಎಂದು ಹೇಳಿದರು.

ವಾಲ್ಮೀಕಿ ರಚಿಸಿರುವ ರಾಮಾಯಣ ಶ್ರದ್ಧೆ, ಆತ್ಮವಿಶ್ವಾಸ, ಧರ್ಯ ಹಾಗೂ ಉತ್ತಮ ನಡವಳಿಕೆ ಮಹತ್ವ ತಿಳಿಸುತ್ತದೆ. ಸಮಾಜದ ಒಳಿತಿಗಾಗಿ ನಮ್ಮಲ್ಲಿ ಬದಲಾವಣೆ ತಂದುಕೊಂಡು, ಸವಾಲುಗಳ ನಡುವೆಯೂ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂಬ ಮಹರ್ಷಿ ವಾಲ್ಮೀಕಿ ಅವರ ತತ್ವವನ್ನು ನಾವು ಅರಿಯಬೇಕು ಎಂದು ತಿಳಿಸಿದರು.


ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, ವಾಲ್ಮೀಕಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಜಯಂತಿ ಉತ್ತಮ ಅವಕಾಶವಾಗಿದೆ. ಪ್ರತಿಯೊಬ್ಬರೂ ಉತ್ತಮ ಅಭ್ಯಾಸ ಮತ್ತು ನಡವಳಿಕೆ ಬೆಳೆಸಿಕೊಳ್ಳಬೇಕು. ರತ್ನಾಕರರು ತಮ್ಮ ಜೀವನವನ್ನು ಪರಿವರ್ತಿಸಿಕೊಂಡು ಮಹರ್ಷಿ ವಾಲ್ಮೀಕಿಯಾದ ಪ್ರಸಂಗವು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಉತ್ತಮ ಗುಣಗಳನ್ನು ರೂಢಿಸಿಕೊಂಡು ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದುಕೊಳ್ಳಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿದ್ದರಾಮಣ್ಣ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಜೀವನ, ಸಾಧನೆ ಹಾಗೂ ಸಾಹಿತ್ಯಕ ಕೊಡುಗೆಗಳ ಕುರಿತು ವಿವರಿಸಿದರು. ಅವರ ಜೀವನದ ಮಹತ್ವದ ಘಟನೆ ಮತ್ತು ಆದರ್ಶ ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಈಶ್ವರಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿದ್ಧಾರಾಜು ಸೇರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.