ಶಾಸಕ ವೀರೇಂದ್ರ ಪಪ್ಪಿ ಸೋಮವಾರ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಗೆ ಸಂಬಂಧಿಸಿದಂತೆ ರೋಗಿಗಳ ಅಹವಾಲು ಆಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗುವ ರೋಗಿಗಳಿಂದ ಹಣ ಪೀಕಲು ಮುಂದಾದರೆ ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವೆಂದು ಶಾಸಕ ವೀರೇಂದ್ರ ಪಪ್ಪಿ ಎಚ್ಚರಿಸಿದರು.

ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲಾಗುತ್ತಿಲ್ಲ, ಬಡ ರೋಗಿಗಳಿಂದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳ ಹಿನ್ನಲೆ ಸೋಮವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ವೈದ್ಯಾಧಿಕಾರಿಗಳ ತೀವ್ರ ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯ ಸ್ವಚ್ಛತೆ, ಆಹಾರದ ಗುಣಮಟ್ಟ ಹಾಗೂ ವೈದ್ಯಕೀಯ ಸೇವೆಗಳಲ್ಲಿ ವಿಪರೀತ ಲೋಪಗಳಾಗಿವೆ ಎಂದು ಶಾಸಕರ ಸಮ್ಮುಖದಲ್ಲಿಯೇ ರೋಗಿಗಳ ಕಡೆಯವರು ದೂರಿದರು. ವಿವಿಧ ವಾರ್ಡ್‌ಗಳಲ್ಲಿ ರೋಗಿಗಳೊಂದಿಗೆ ನೇರವಾಗಿ ಸಮಾಲೋಚನೆ ನಡೆಸಿ ಆಸ್ಪತ್ರೆಯ ಕಾರ್ಯವೈಖರಿ ಪರಿಶೀಲಿಸಿದ ವೀರೇಂದ್ರ ಪಪ್ಪಿ, ಸರ್ಕಾರಿ ಆಸ್ಪತ್ರೆಗೆ ಬಡವರು, ಮಧ್ಯಮ ವರ್ಗದವರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನರು ಚಿಕಿತ್ಸೆಗಾಗಿ ಬರುತ್ತಾರೆ. ಅಂತಹವರಿಗೆ ಉತ್ತಮ ಚಿಕಿತ್ಸೆ ನೀಡಿ ಸರ್ಕಾರಿ ವ್ಯವಸ್ಥೆ ಬಗ್ಗೆ ಆತ್ಮ ವಿಶ್ವಾಸ ಮೂಡಿಸಬೇಕು. ಇದರ ಬದಲಾಗಿ ಹಣಕ್ಕೆ ಬೇಡಿಕೆ ಇಟ್ಟರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಅಪ ನಂಬಿಕೆಗಳು ಉಂಟಾಗುತ್ತವೆ ಎಂದರು.

ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆಯೇ ಎಂಬುದರ ಕುರಿತು ರೋಗಿಗಳನ್ನು ವಿಚಾರಿಸಿದರು. ವೈದ್ಯರು ಸಮಯಕ್ಕೆ ಸರಿಯಾಗಿ ಲಭ್ಯವಾಗುತ್ತಿದ್ದಾರೆಯೇ, ಅಗತ್ಯ ಔಷಧಿಗಳು ದೊರೆಯುತ್ತಿವೆಯೇ, ಚಿಕಿತ್ಸೆಯ ಸಂದರ್ಭದಲ್ಲಿ ಯಾವುದೇ ತೊಂದರೆ ಎದುರಾಗುತ್ತಿದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.

ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಸೂಚಿಸಿದರು.

ಜಿಲ್ಲಾ ಆಸ್ಪತ್ರೆಯ ಒಳರೋಗಿಗಳಿಗೆ ಉಚಿತವಾಗಿ ಆಹಾರ ಸಿದ್ಧಪಡಿಸಿ ವಿತರಿಸುವ ಅಡುಗೆ ಕೋಣೆಗೂ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ ನೀಡಿ ಪರಿಶೀಲಿಸಿದರು.

ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಕೊಠಡಿಗಳು, ಅಡುಗೆಗೆ ಬಳಸುವ ಸಾಮಗ್ರಿಗಳು ಹಾಗೂ ಅಡುಗೆ ಕೋಣೆಯ ಸ್ವಚ್ಛತೆ ಮತ್ತು ಗುಣಮಟ್ಟವ ಮೌಲ್ಯಮಾಪನ ಮಾಡಿದರು. ಪ್ರತಿದಿನ ಸುಮಾರು 600 ರಿಂದ 800 ಜನರಿಗೆ ಊಟ ವಿತರಿಸಲಾಗುತ್ತದೆ ಎಂಬ ಹಿನ್ನೆಲೆಯಲ್ಲಿ, ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗಬಾರದು ಎಂದು ಸೂಚಿಸಿದರು.

ಹೆರಿಗೆ ಮಾಡಿಸಲು 8 ರಿಂದ 10 ಸಾವಿರ ರು. ವರೆಗೆ ಹಣ ಪಡೆಯಲಾಗುತ್ತಿದೆ ಎಂಬ ಮಾಹಿತಿ ಕೇಳಿಬಂದ ಹಿನ್ನೆಲೆಯಲ್ಲಿ, ಶಾಸಕರು ವಾರ್ಡ್‌ಗಳಿಗೆ ತೆರಳಿ ಅಲ್ಲಿದ್ದ ಮಹಿಳೆಯರು ಮತ್ತು ಅವರ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಸಂಬಂಧಿಸಿದ ಸೇವೆಗಳಿಗಾಗಿ ಅನಧಿಕೃತವಾಗಿ ಹಣ ಪಡೆಯುವುದು ದೃಢಪಟ್ಟರೆ, ಶಿಸ್ತು ಕ್ರಮ ಅನಿವಾರ್ಯವೆಂದು ಎಚ್ಚರಿಸಿದರು.

ಚಿತ್ರದುರ್ಗ ಮೆಡಿಕಲ್ ಕಾಲೇಜು ಡೀನ್ ಯುವರಾಜ್, ಜಿಲ್ಲಾಸ್ಪತ್ರೆ ಸರ್ಜನ್ ಡಿ ಎಸ್ ರವೀಂದ್ರ, ಡಾ.ಪಾರ್ವತಿ, ನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಂಜಿನಪ್ಪ ಇದ್ದರು.