ಸಾರಾಂಶ
ಕೆಜಿಎಫ್: ರಾಜಕೀಯ ವೈಷ್ಯಮ್ಯದ ಹಿನ್ನೆಲೆಯಿಂದ ಸ್ವಾಭಿಮಾನಿ ಬಣದ ಮೋಹನ್ ಕೃಷ್ಣರ ಕೋಳಿಫಾರಂಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ೯ ಸಾವಿರ ಕೋಳಿ ಮರಿಗಳು ಸಾವನ್ನಪ್ಪಿವೆ, ಬೆಂಕಿ ಅನಾಹುತದಿಂದ ಅಂದಾಜು ೨೦ ಲಕ್ಷ ರು.ಗಳ ನಷ್ಟ ಉಂಟಾಗಿರುವುದಾಗಿ ಆಗ್ನಿಶಾಮಕ ದಳದವರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ೧೧.೩೦ರ ವೇಳೆ ರಾಮಸಾಗರ ಗ್ರಾಪಂ ವ್ಯಾಪ್ತಿಗೆ ಬರುವ ನೆರ್ನಹಳ್ಳಿ ಬಳಿ ಇರುವ ಕೋಳಿ ಫಾರಂನ ಹಿಂಭಾಗದಿಂದ ಅಪರಿಚಿತ ವ್ಯಕ್ತಿಗಳು ಕೋಳಿ ಶೆಡ್‌ಗೆ ಬೆಂಕಿ ಹಂಚಿ ಪರಾರಿಯಾಗಿದ್ದಾರೆ.ಅಗ್ನಿ ಅವಘಡದಲ್ಲಿ ೯ ಸಾವಿರ ಕೋಳಿ ಮರಿಗಳು, ಕೋಳಿ ಫಾರಂನ ಪರಿಕರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ, ನಂತರ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದವರು ಸೇರಿಕೊಂಡು ಕೋಳಿ ಫಾರಂ ಶೆಡ್‌ನ ಬೆಂಕಿ ನಂದಿಸಿದ್ದಾರೆ, ಶೇ.೯೦ ರಷ್ಟು ಭಾಗ ಸುಟ್ಟು ಕರಕಲಾಗಿರುವ ಶೆಡ್‌ನಲ್ಲಿ ಬರೀ ಅವಶೇಷಗಳು ಮಾತ್ರ ಉಳಿದಿವೆ. ನಿರ್ದಿಷ್ಟವಾಗಿ ಯಾರ ಹೆಸರನ್ನೂ ಹೇಳದ ಮೋಹನ್ ಕೃಷ್ಣ ವಿರೋಧಿಗಳಿಗೆ ದೇವರು ಒಳ್ಳೆಯ ಬುದ್ದಿ ನೀಡಲಿ ಎಂದಷ್ಟೇ ಉತ್ತರಿಸಿ ಸುಮ್ಮನಾದರು, ಬೆಂಬಲಿಗರು ಪೊಲೀಸರಿಗೆ ದೂರು ನೀಡುವಂತೆ ಒತ್ತಾಯಿಸಿದರು. ಪೊಲೀಸರಿಗೆ ಯಾವುದೇ ದೂರನ್ನು ಮೋಹನ್‌ಕೃಷ್ಣ ನೀಡಿಲ್ಲ. ಸ್ಥಳಕ್ಕೆ ಬೇತಮಂಗಲ ವೃತ್ತ ನಿರೀಕ್ಷಕ ರಂಗಶಾಮಯ್ಯ ಭೇಟಿ ನೀಡಿ ಆಗ್ನಿ ಅವಘಡದ ಕುರಿತು ಪರಿಶೀಲನೆ ನಡೆಸಿದರು,