ರೈತರ ಹಿತ ಕಾಯುವುದೇ ತಂಬಾಕು ಮಂಡಳಿಯ ಮುಖ್ಯ ಉದ್ದೇಶ

| Published : Aug 02 2024, 12:47 AM IST

ಸಾರಾಂಶ

ಈ ಬಾರಿ ಪಿರಿಯಾಪಟ್ಟಣ ಸೇರಿದಂತೆ ಸುತ್ತಮುತ್ತಲಿನ ತಾಲೂಕಿನಲ್ಲಿ ಹೆಚ್ಚು ಮಳೆಯ ಪರಿಣಾಮ ಅತೀ ವೃಷ್ಟಿ ಸಂಭವಿಸಿ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ತಂಬಾಕು ರೈತರ ಹಿತ ಕಾಯುವುದು ತಂಬಾಕು ಮಂಡಳಿಯ ಮುಖ್ಯ ಉದ್ದೇಶ ಎಂದು ತಂಬಾಕು ಮಂಡಳಿ ಅಧ್ಯಕ್ಷ ಸಿ.ಎಚ್. ಯಶವಂತ್ ಕುಮಾರ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಕಗ್ಗುಡಿಯ ತಂಬಾಕು ಹ ರಾಜು ಮಾರುಕಟ್ಟೆಯ ಆವರಣದಲ್ಲಿರುವ ರೈತ ಭವನದಲ್ಲಿ ನಡೆದ ತಂಬಾಕು ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಪಿರಿಯಾಪಟ್ಟಣ ಸೇರಿದಂತೆ ಸುತ್ತಮುತ್ತಲಿನ ತಾಲೂಕಿನಲ್ಲಿ ಹೆಚ್ಚು ಮಳೆಯ ಪರಿಣಾಮ ಅತೀ ವೃಷ್ಟಿ ಸಂಭವಿಸಿ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ 68 ಸಾವಿರ ಹೆಕ್ಟರ್ ಪ್ರದೇಶದಲ್ಲಿ ತಂಬಾಕು ಬೆಳೆಯನ್ನು ಬೆಳೆಯಲಾಗಿತ್ತು, ಇದರ ಅಂದಾಜಿನಲ್ಲಿ ಸುಮಾರು 100 ಮಿಲಿಯನ್ ಕೆ.ಜಿ. ತಂಬಾಕು ಬೆಳೆಯಬಹುದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಮೇ, ಜೂನ್, ಜುಲೈ ತಿಂಗಳಿನಲ್ಲಿ ಸತತವಾಗಿ ಮಳೆಯಾಗಿರುವುದರಿಂದ ಬೆಳೆ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ.

ಈ ಬಾರಿ ತಂಬಾಕು ಮಂಡಳಿ ರೈತರಿಗೆ 25 ಸಾವಿರ ರು. ಗಳನ್ನು ಬಡ್ಡಿ ರಹಿತವಾಗಿ ಸಾಲವನ್ನು ನೀಡುವ ಕೆಲಸವನ್ನು ಮಾಡುವ ನಿರ್ಧಾರ ಮಾಡಿ ರೈತರ ಪರವಾಗಿ ನಿಂತಿದೆ ಎಂದರು.

ಪಿರಿಯಾಪಟ್ಟಣದಲ್ಲಿ ಬೆಳೆಯುವ ತಂಬಾಕು ಉತ್ಕೃಷ್ಟ ಗುಣಮಟ್ಟದಿಂದ ಕೂಡಿದ್ದು, ಈ ಬಾರಿ ಉತ್ತಮ ಬೆಲೆಯನ್ನು ಪಡೆಯುವ ನಿರೀಕ್ಷೆ ಮಾಡಬಹುದು.

ಆದ್ದರಿಂದ ರೈತರು ಕಾಳಸಂತೆಯಲ್ಲಿ ತಂಬಾಕು ಮಾರಾಟ ಮಾಡಬಾರದು ಎಂದು ಮನವಿ ಮಾಡಿದ ಅವರು, ತಂಬಾಕು ಬೆಳೆಗೂ ವಿಮೆ ಸೌಲಭ್ಯವನ್ನು ನೀಡುವ ಸಲುವಾಗಿ ಕೇಂದ್ರ ಕೃಷಿ ಸಚಿವರಿಗೆ ಮನವಿಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಪ್ರಗತಿಪರ ರೈತ ಹುಣಸೆ ಕುಪ್ಪೆ ಚಂದ್ರೇಗೌಡ ಮಾತನಾಡಿ, ಈ ಬಾರಿ ಮಳೆ ಹೆಚ್ಚಾಗಿ ತಂಬಾಕು ಬೆಳೆ ಇಳುವರಿ ಬಂದಿಲ್ಲ, ಆದ್ದರಿಂದ ತಂಬಾಕು ಮಂಡಳಿ ಉತ್ತಮ ಬೆಲೆಯನ್ನು ನೀಡಬೇಕು ಮಾರುಕಟ್ಟೆಯನ್ನು ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭ ಮಾಡಿದರೆ ಸೂಕ್ತ ಏಕೆಂದರೆ ಈ ಬಾರಿ ತೆವಾಂಶ ಹೆಚ್ಚಾಗಿರುವುದರಿಂದ ತಂಬಾಕು ಹಾಳಾಗುವ ಸಂಭವ ಇದೆ ಅನಧಿಕೃತ ತಂಬಾಕು ಬೆಳೆಗಾರರಿಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟ ಮಾಡಲು ಅನುಮತಿ ನೀಡಬೇಕು ಎಂದರು.

ಪಿರಿಯಾಪಟ್ಟಣ, ಹುಣಸೂರು, ಕೃಷ್ಣರಾಜನಗರ, ರಾಮನಾಥಪುರ ಎಚ್.ಡಿ. ಕೋಟೆ ತಾಲೂಕಿನ ರೈತರು ತಂಬಾಕು ನಿರ್ದೇಶಕ ಮಂಡಳಿಯ ಕೇಂದ್ರ ಕಚೇರಿಯನ್ನು ಕೂಡಲೇ ಸ್ಥಳಾಂತರ ಮಾಡಬೇಕು, ತಪ್ಪಿದ್ದಲ್ಲಿ ತಂಬಾಕು ಮಂಡಳಿ ವಿರುದ್ಧ ಉಗ್ರ ಪ್ರತಿಭಟನೆ ಮಾಡುವುದಾಗಿ ಮಂಡಳಿ ಅಧ್ಯಕ್ಷ ಹಾಗೂ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಆರ್.ಒ. ಸುಬ್ಬರಾವ್, ಮಾಜಿ ಶಾಸಕ ಹಾಗೂ ಉಪಾಧ್ಯಕ್ಷ ಎಚ್.ಸಿ. ಬಸವರಾಜು, ಸದಸ್ಯರಾದ ವಿಕ್ರಂರಾಜ್, ದಿನೇಶ್ ಮಾತನಾಡಿದರು.

ಹರಾಜು ಅಧೀಕ್ಷಕರಾದ ಧನರಾಜ್, ಸಿದ್ದರಾಮ್ ದಾಂಗೆ, ಪ್ರಭಾಕರ್, ಚಂದ್ರಶೇಖರ್, ರಾಮ್ ಮೋಹನ್ ಸುರೆ, ನೀವೇಶ್ ಕುಮಾರ್ ಪಾಂಡೆ, ಸವಿತಾ, ಬ್ರಿಜ್ ಭೂಷಣ್, ರೈತ ಮುಖಂಡರಾದ ಶಂಕರೇಗೌಡ, ಕಗ್ಗುಡಿ ಸುರೇಶ, ಹಿಟ್ನಳ್ಳಿ ಪರಮೇಶ್, ಬಸಲಾಪುರ ಜವರೇಗೌಡ, ಹೊಸೂರು ಕುಮಾರ್ ಸೇರಿದಂತೆ ರೈತರು ಹಾಗೂ ತಂಬಾಕು ಮಂಡಳಿ ಅಧಿಕಾರಿಗಳು ಇದ್ದರು.