ಮಕ್ಕಳು ಈ ದೇಶದ ಬಹುದೊಡ್ಡ ಆಸ್ತಿ. ಅವರ ಜ್ಞಾನ ಭಂಡಾರವೇ ದೇಶದ ಶ್ರೀಮಂತಿಕೆ. ನಮ್ಮ ಮಕ್ಕಳು ಕೇವಲ ನಮ್ಮ ಮನೆಗಷ್ಟೇ ಅಲ್ಲ, ರಾಷ್ಟ್ರದ ವಾರಸುದಾರರಾಗಿದ್ದಾರೆ. ಅವರಿಗೆ ಉತ್ತಮ ಜ್ಞಾನ ಮತ್ತು ಸಂಸ್ಕಾರ ನೀಡುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮಕ್ಕಳು ಈ ದೇಶದ ಬಹುದೊಡ್ಡ ಆಸ್ತಿ. ಅವರ ಜ್ಞಾನ ಭಂಡಾರವೇ ದೇಶದ ಶ್ರೀಮಂತಿಕೆ. ನಮ್ಮ ಮಕ್ಕಳು ಕೇವಲ ನಮ್ಮ ಮನೆಗಷ್ಟೇ ಅಲ್ಲ, ರಾಷ್ಟ್ರದ ವಾರಸುದಾರರಾಗಿದ್ದಾರೆ. ಅವರಿಗೆ ಉತ್ತಮ ಜ್ಞಾನ ಮತ್ತು ಸಂಸ್ಕಾರ ನೀಡುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.

ಮುಧೋಳ ನಗರದ ವಿಜಯ ಅಂತಾರಾಷ್ಟ್ರೀಯ ಶಾಲೆಯಲ್ಲಿ ಎಂ.ಆರ್.ಎನ್ (ನಿರಾಣಿ) ಫೌಂಡೇಶನ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಜ್ಞಾನ ಸಂಜೀವಿನಿ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಯೋಜನೆಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಮಕ್ಕಳಲ್ಲಿ ಅದ್ಭುತ ಪ್ರತಿಭೆ ಹಾಗೂ ಯೋಚನಾ ಶಕ್ತಿ ಇದೆ. ಅವರ ಹೊಸ ಆಲೋಚನೆಗಳು ಜಗತ್ತನ್ನು ಆಳುತ್ತಿವೆ. ಕಲಿಯುವ ಮಕ್ಕಳಿಗೆ ಬಡತನ ಅಡ್ಡಿಯಾಗಬಾರದು. ಈ ನಿಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೆರವು ನೀಡುವ ಮೂಲಕ ಅವರ ವ್ಯಾಸಂಗ ಹೊಣೆ ನಿಭಾಯಿಸುವ ಕಾರ್ಯವನ್ನು ನಿರಾಣಿ ಫೌಂಡೇಶನ್ ಮಾಡಲಿದೆ. ಅವರ ಮುಂದಿನ ಶಿಕ್ಷಣದ ಖರ್ಚುವೆಚ್ಚುಗಳಿಗೆ ನಿರಾಣಿ ಫೌಂಡೇಶನ್ ಜೊತೆಯಾಗಿ ನಿಲ್ಲುತ್ತದೆ ಎಂದು ಹೇಳಿದರು.ಮಕ್ಕಳಿಗೆ ವಿಶೇಷ ಕಲಿಕಾ ತರಬೇತಿ:

ಈ ಸಂದರ್ಭದಲ್ಲಿ ಮಕ್ಕಳ ಮಾನಸಿಕ ದೃಢತೆ, ವ್ಯಕ್ತಿತ್ವ ನಿರ್ಮಾಣ, ಓದುವ ಕಲೆ, ಬರೆಯುವ ಕಲೆ, ಕಲಿಕಾ ಸವಾಲುಗಳ ಕುರಿತು ಧಾರವಾಡದ ಹಿರಿಯ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಹಾಗೂ ಜಮಖಂಡಿ ಬಿ.ಆರ್.ಪಿ ರಮೇಶ ಅವಟಿ ಮಾರ್ಗದರ್ಶನ ನೀಡಿದರು.

ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿರಾಣಿ ಫೌಂಡೇಷನ್ ವತಿಯಿಂದ ಶೈಕ್ಷಣಿಕ ಕಿಟ್ ನೀಡಲಾಯಿತು. ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ನ್ಯಾಮಗೌಡ್ರ, ರಾಜು ಟಂಕಸಾಲಿ, ಬಸವರಾಜ ಮಾನೆ, ಐ.ಜಿ. ನ್ಯಾಮಗೌಡ್ರ, ಮಲ್ಲಿಕಾರ್ಜುನ ಹೆಗ್ಗಳಗಿ ಸೇರಿದಂತೆ ಇತರರು ಭಾಗವಹಿಸಿದ್ದರು. ಗಿರೀಶ ಆನಿಖಿಂಡಿ ಸ್ವಾಗತಿಸಿದರು, ಮಹಾಂತೇಶ ಕಂಬಾರ ನಿರೂಪಿಸಿದರು, ಅರುಣ ತೋಟಗಿ ವಂದಿಸಿದರು.

ಮಕ್ಕಳಿಗೆ ಶಿಕ್ಷಣ ನೀಡುವುದು ಪ್ರತಿ ಪಾಲಕನ ಮಹತ್ವದ ಜವಾಬ್ದಾರಿ. ಕೇವಲ ಶಾಲೆಗೆ ಸೇರಿಸಿದರೆ ಜವಾಬ್ದಾರಿ ಮುಗಿಯಲ್ಲ. ಶಾಲೆ, ಶಿಕ್ಷಕರು ಹಾಗೂ ಮಕ್ಕಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಮಕ್ಕಳ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಈ ಯೋಜನೆಯಡಿ ಆಯ್ಕೆಯಾದ 150 ವಿದ್ಯಾರ್ಥಿಗಳು ಯೋಜನೆಯ ಸಂಪೂರ್ಣ ಲಾಭ ಪಡೆದು ಯಶಸ್ವಿ ಬದುಕು ಕಟ್ಟಿಕೊಳ್ಳಬೇಕು.

- ಡಾ.ಮುರುಗೇಶ ನಿರಾಣಿ, ಉದ್ಯಮಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ