ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕಾವೇರಿ 3.0 ತಂತ್ರಾಂಶದಿಂದ ದಸ್ತು ಬರಹಗಾರರ ಜೀವನೋಪಾಯಕ್ಕೆ ತೊಂದರೆಯಾಗಲಿದೆ. ಸರ್ಕಾರ ಪೇಪರ್ ಲೆಸ್ ನೋಂದಣಿ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ದಸ್ತು ಬರಹಗಾರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕಾವೇರಿ 3.0 ತಂತ್ರಾಂಶದಿಂದ ದಸ್ತು ಬರಹಗಾರರ ಜೀವನೋಪಾಯಕ್ಕೆ ತೊಂದರೆಯಾಗಲಿದೆ. ಸರ್ಕಾರ ಪೇಪರ್ ಲೆಸ್ ನೋಂದಣಿ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ದಸ್ತು ಬರಹಗಾರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ಆನಂದ ನ್ಯಾಮಗೌಡ ಭೇಟಿ ನೀಡಿ ದಸ್ತು ಬರಹಗಾರರ ಸಮಸ್ಯೆ ಆಲಿಸಿದರು, ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಎಲ್ಲ ಮಾಹಿತಿ ನೀಡಿ ಸರ್ಕಾರ ದಸ್ತು ಬರಹಗಾರರ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.ಜಿಲ್ಲಾ ದಸ್ತು ಬರಹಗಾರರ ಸಂಘದ ಅಧ್ಯಕ್ಷ ಬಸವರಾಜ ತೆಲಸಂಗ ಮಾತನಾಡಿ, ರಾಜ್ಯದಲ್ಲಿ 15000 ಜನ ದಸ್ತು ಬರಹಗಾರರಿದ್ದಾರೆ, ಅವರ ಜೀವನೋಪಾಯಕ್ಕೆ ಸರ್ಕಾರದ ಪೇಪರ್‌ಲೆಸ್ ನೋಂದಣಿಯಿಂದ ಕುಟುಂಬಗಳು ಬೀದಿಪಾಲಾಗುತ್ತವೆ. ದಸ್ತು ಬರಹಗಾರರನ್ನು ತೆಗೆಯುವುದಿಲ್ಲ ಎಂದು ಹೇಳುವ ಸರ್ಕಾರ ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲು ಹೊರಟಿದೆ, ಸರ್ಕಾರ ಕೂಡಲೇ ಕಾವೇರಿ 3.0 ತಂತ್ರಾಂಶ ಜಾರಿಗೆ ತರುವುದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಧರಣಿ ಸತ್ಯಾಗ್ರಹ; ಬೆಳಗಾವಿಯ ಸುವರ್ಣ ಸೌಧದ ಎದುರು ಡಿ,16ರಿಂದ ರಾಜ್ಯ ದಸ್ತು ಬರಹಗಾರರ ಸಂಘದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವುದರಿಂದ ದಸ್ತು ಬರಹಗಾರರು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಬಸವರಾಜ ತೆಲಸಂಗ ಹೇಳಿದರು. ದಸ್ತು ಬರಹಗಾರರಾದ ಈರಣ್ಣ ಬಂಡಿಗಣಿ, ಎಸ್.ಆರ್.ಸಿದ್ದಾರ, ಶ್ರೀಶೈಲ ಗುರ್ಲಾಪುರ, ಮೋಹನ ಸಬರದ, ದುಂಡಪ್ಪ ಚಿತ್ತಾಪುರ, ಸುಭಾಷ ಬಂಡಿಗಣಿ, ಶ್ರೀಶೈಲ ಅಂಬಿ ಮುಂತಾದವರಿದ್ದರು.