ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಪ್ರತಿ ಭಾನುವಾರ ತಾಲೂಕಿನಲ್ಲಿ ವಿನಾಕಾರಣ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು ಇದಕ್ಕೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕೊರಟಗೆರೆ ಪಟ್ಟಣ ಸೇರಿದಂತೆ ತಾಲೂಕಿನ ಸುಮಾರು ೮ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದೆ. ಈ ಕುರಿತು ಸಾಕಷ್ಟು ಬಾರಿ ಹೇಳಿದರೂ ಏನು ಪ್ರಯೋಜನ ಆಗಿಲ್ಲ. ವಿದ್ಯುತ್ ಇಲ್ಲದೇ ಎಷ್ಟೋ ಜನರಿಗೆ ತೊಂದರೆ ಉಂಟಾಗುತ್ತದೆ. ಭಾನುವಾರ ಬಿಟ್ಟು ಬೇರೆ ದಿನಗಳಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ನಾಗರಿಕರು ಪೋಸ್ಟ್ ಮಾಡಿ ಬೆಸ್ಕಾಂ ನಡೆಯನ್ನು ಖಂಡಿಸಿದ್ದಾರೆ. ವಾರ ಪೂರ್ತಿ ಕೆಲಸ ಮಾಡಿ ವಾರಕ್ಕೆ ಒಂದು ದಿನ ಮನೆಯಲ್ಲಿ ಕುಟಂಬಸ್ಥರೊಂದಿಗೆ ನೆಮ್ಮದಿಯಿಂದ ಕಾಲ ಕಳೆಯಬೇಕು ಎಂದು ಜನರು ಅಂದುಕೊಂಡಿದ್ದಾರೆ. ಆದರೆ ಈ ಸಂತಸ ನೆಮ್ಮದಿಗೆ ಬೆಸ್ಕಾಮ ವಿದ್ಯುತ್ ಕಡಿತದ ಹೆಸರಿನಲ್ಲಿ ಅದಕ್ಕೆ ತಣ್ಣಿರೇರಚುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಸಣ್ಣಗೆ ಬೇಸಿಗೆ ಆರಂಭದ ಲಕ್ಷಣಗಳಿದ್ದು, ಈಗಾಗಲೇ ಜಿಲ್ಲೆಯಲ್ಲಿ ತಾಪಮಾನ 30ರ ಗಡಿದಾಡಿದೆ. ಇದರಿಂದಾಗಿ ಮಧ್ಯಾಹ್ನ ಕಾಲ ದೂಡುವುದು ಕಷ್ಟವಾಗುತ್ತಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ ಬೇರೆ ದಿನ ಕಡಿತ ಮಾಡಿದರೆ ಸರ್ಕಾರಿ ಕೆಲಸಗಳಿಗೆ ಸಮಸ್ಯೆ ಆಗುತ್ತದೆ. ಆದ್ದರಿಂದ ಭಾನುವಾರ ಮಾತ್ರ ಮಾಡುತ್ತೇವೆ ಎನ್ನುತ್ತಾರೆ. ಆದರೆ ಪ್ರತಿ ಭಾನುವಾರ ಬಿಟ್ಟು ಬಿಡದೆ ಮಾಡುವ ಕೆಲಸವಾದರೂ ಏನು ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕಾರಣ ಬೇರೆ ಜಿಲ್ಲೆಗಳಲ್ಲಿ ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಲೆಕ್ಕದಲ್ಲಿ ಅದು ಒಂದು ದಿನ ಬೆಳಿಗ್ಗೆ 10 ರಿಂದ 5ರವರೆಗೆ ಮಾತ್ರ ವಿದ್ಯುತ್ ಕಡಿತ ಮಾಡುತ್ತಿದ್ದಾರೆ. ಆದರೆ ತುಮಕೂರು ಜಿಲ್ಲೆಯಲ್ಲಿ ಮಾತ್ರ ಈ ರೀತಿ ಪ್ರತಿ ಭಾನುವಾರ ಕಡಿತ ಮಾಡುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಾಕಷ್ಟು ಸಾರ್ವಜನಿಕರು ವಿದ್ಯುತ್ ಮಾರಾಟ ಮಾಡಲಾಗುತ್ತಿರಬಹುದು ಎಂಬ ಅನುಮಾನವನ್ನು ಸಹ ವ್ಯಕ್ತಪಡಿಸಿರುವುದು ಹೊಸ ಚರ್ಚೆಗೆ ನಾಂದಿ ಹಾಡಿದೆ.
;Resize=(128,128))
;Resize=(128,128))