ಹಾವೇರಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ನೈತಿಕ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದ ಹಿನ್ನೆಲೆ ವಿದ್ಯಾರ್ಥಿ-ಯುವಜನರ ಐಕ್ಯ ಹೋರಾಟಕ್ಕೆ ಸಂದ ಜಯ ಎಂದು ಹೋರಾಟಗಾರರು ಸಂಭ್ರಮಾಚರಣೆ ಮಾಡಿದರು.

ನಗರದ ಮೈಲಾರ ಮಹಾದೇವಪ್ಪ ಸರ್ಕಲ್‌ನಲ್ಲಿ ಎಸ್‌ಎಫ್‌ಐ, ಡಿವೈಎಫ್‌ಐ, ಡಿಎಸ್‌ಎಸ್, ಬಿಎಸ್ಪಿ, ರೈತ ಮುಖಂಡರು, ವಕೀಲರು ಹಾಗೂ ಪ್ರಗತಿಪರ ಸಂಘಟನೆ ನಾಯಕರು, ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪರಸ್ಪರ ಸಿಹಿ ಹಂಚಿ ಹರ್ಷೋದ್ಘಾರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ನೀಟ್ ಹಗರಣವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಕೊನೆಗೂ ಒಪ್ಪಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದಿರುವುದು ದೇಶದ ಲಕ್ಷಾಂತರ ವಿದ್ಯಾರ್ಥಿ ಯುವಜನರ ಐಕ್ಯ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯವಾಗಿದೆ ಎಂದರು.

ಭಾರತದ ಪ್ರಜಾಪ್ರಭುತ್ವದಲ್ಲಿ ಯುವಜನರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ದೇಶದಾದ್ಯಂತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಉತ್ತರದಾಯಿತ್ವವನ್ನು ಒತ್ತಾಯಿಸಿ ಹೋರಾಟ ನಡೆಸಿದ ಹಾಗೂ ಆ ದುರ್ಘಟನೆಗಳಿಂದ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾದ ಪರಿಸ್ಥಿತಿಗೆ ನ್ಯಾಯ ಕೋರಿ ಹೋರಾಡಿದ ದೇಶದ ವಿದ್ಯಾರ್ಥಿ-ಯುವಜನರಿಗೆ ಎಸ್‌ಎಫ್‌ಐ, ಡಿವೈಎಫ್‌ಐ, ಡಿಎಸ್‌ಎಸ್, ಡಿಎಚ್‌ಎಸ್, ಕರ್ನಾಟಕ ರಾಜ್ಯ ರೈತ ಸಂಘ, ಸಿಐಟಿಯು, ಬಿಎಸ್ಪಿ, ಕರವೇ, ಸಾಹಿತಿ ಕಲಾವಿದರ ಬಳಗ ಸೇರಿದಂತೆ ಜಿಲ್ಲೆಯ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತವೆ ಎಂದಿದ್ದಾರೆ.

ನ್ಯಾಯವಾದಿ ಬಸವರಾಜ ಹಾದಿಮನಿ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಮಾತನಾಡಿ, ನಮ್ಮ ಹೋರಾಟ ಇಲ್ಲಿಗೆ ಅಂತ್ಯವಾಗುವುದಿಲ್ಲ. ಎನ್‌ಟಿಎ ಸಂಪೂರ್ಣವಾಗಿ ವಜಾಗೊಳ್ಳುವವರೆಗೆ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಹಿಂಪಡೆಯುವವರೆಗೆ ಹಾಗೂ ಪರೀಕ್ಷಾ ಅಕ್ರಮಗಳಿಂದ ಬಲಿಪಶುಗಳಾದ ಎಲ್ಲಾ ವಿದ್ಯಾರ್ಥಿಗಳಿಗೆ ನ್ಯಾಯ ದೊರಕುವವರೆಗೆ ಎಸ್‌ಎಫ್‌ಐ ತನ್ನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ ಎಂದರು.


ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯೆ ಪರಿಮಳ ಜೈನ, ನ್ಯಾಯವಾದಿ ನಾರಾಯಣ ಕಾಳೆ, ಎಸ್.ಎಸ್.ಖಾಜಿ, ಎಸ್‌ಎಫ್‌ಐ ಕಾಲೇಜ್ ಘಟಕ ಅಧ್ಯಕ್ಷೆ ಚೈತ್ರಾ ಕೊರವರ, ಧನುಷ್ ದೊಡ್ಡಮನಿ, ವಿಠಲ ಗೌಳಿ, ರೈತರ ಮುಖಂಡ ಸುರೇಶ ಛಲವಾದಿ, ದಲಿತ ಸಂಘರ್ಷ ಸಮಿತಿ ಉಡಚಪ್ಪ ಮಾಳಗಿ, ಶಂಭು ಕಳಸದ, ಡಿವೈಎಫ್‌ಐ ಮುಖಂಡ ಖಲಂದರ್ ಅಲ್ಲಿಗೌಡ್ರು, ಯುವ ಮುಖಂಡ ಪ್ರಸನ್ನ ಹಿರೇಮಠ, ರಫೀಕ್ ಅಹಮ್ಮದ್, ಬಿಎಸ್ಪಿ ಜಿಲ್ಲಾಧ್ಯಕ್ಷ ಎಂ.ಕೆ. ಮಕಬುಲ್, ಅಲೆಮಾರಿ ಸಮುದಾಯದ ವಿಭೂತಿ ಶೆಟ್ಟಿ, ತಸ್ಲೀಮ್, ಶರಣು ಸಂಗನಹಾಳ ಸೇರಿದಂತೆ ಇತರರು ಇದ್ದರು.