ತ್ಯಾಜ್ಯ ನೀರು ಸಂಸ್ಕರಣೆ ಕಾರ್ಯ ನಿರ್ವಹಣೆಗೆ ಪ್ರಶಂಸೆ

| Published : Nov 17 2025, 01:45 AM IST

ಸಾರಾಂಶ

₹25 ಲಕ್ಷ ಹೆಚ್ಚು, ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ.

ಹೂವಿನಹಡಗಲಿ: ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಮನೆಗಳಿಂದ ಒಳ ಚರಂಡಿ ಮೂಲಕ ಬರುವ ತ್ಯಾಜ್ಯ ನೀರನ್ನು ಸಂಸ್ಕರಣೆ ಘಟಕದಿಂದ ಉತ್ತಮ ನಿರ್ವಹಣೆ ಮಾಡುತ್ತಿದ್ದು, ಇದರಿಂದ ಕೇಂದ್ರ ಮೆಚ್ಚುಗೆ ವ್ಯಕ್ತಪಡಿಸುವ ಜತೆಗೆ ₹25 ಲಕ್ಷ ಹೆಚ್ಚು, ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಇದರಿಂದ ರಾಜ್ಯಕ್ಕೆ ಮಲ್ಲಿಗೆ ನಾಡಿನ ತ್ಯಾಜ್ಯ ಸಂಸ್ಕರಣಾ ಘಟಕ ಮಾದರಿಯಾಗಿದೆ.

ಪಟ್ಟಣದ ತ್ಯಾಜ್ಯ ನೀರನ್ನು ಸಂಸ್ಕರಣೆ ಮೂಲಕ ನೀರನ್ನು ಹಳ್ಳದ ಮೂಲಕ ನದಿಗೆ ಬಿಡಲು ಒಳ ಚರಂಡಿ ವ್ಯವಸ್ಥೆಯನ್ನು ಈ ಹಿಂದಿನ ಉಪ ಮುಖ್ಯಮಂತ್ರಿ ಆಗಿದ್ದ ಎಂ.ಪಿ.ಪ್ರಕಾಶ ಕಾಮಗಾರಿಗೆ ಚಾಲನೆ ನೀಡಿದ್ದರು.

ಪಟ್ಟಣದ ಪುರಸಭೆಯಿಂದ 23 ವಾರ್ಡ್‌ಗಳಲ್ಲಿ ಒಳ ಚರಂಡಿ ನಿರ್ಮಾಣ ಮಾಡಲಾಗಿದ್ದು, ಇದರ ನಿರ್ವಹಣೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವಹಿಸಲಾಗಿತ್ತು. ಒಳಚರಂಡಿಯಿಂದ ಬರುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು ನವಲಿ ಗ್ರಾಮದ ಹೊರವಲಯದ 2016ರಲ್ಲಿ 10 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ₹40 ಲಕ್ಷ ವೆಚ್ಚದಲ್ಲಿ ಆರಂಭವಾದ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಈವರೆಗೂ ಕೇಂದ್ರ ಮತ್ತು ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಒಟ್ಟು ₹1.83 ಕೋಟಿ ವೆಚ್ಚದಲ್ಲಿ ನಿರ್ಮಿಸಿ, ನೀರು ಶುದ್ಧೀಕರಣ ಮಾಡಿ ಮರು ಬಳಕೆ ಮಾಡಲಾಗುತ್ತಿದೆ.

ಈ ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ತ್ಯಾಜ್ಯ ನೀರು ಸಂಗ್ರಹಣಾ ತೊಟ್ಟಿಯಲ್ಲಿ ಸಂಗ್ರಹವಾದ ಬಳಿಕ ಪ್ರಾಥಮಿಕ ಹಂತದಲ್ಲಿ ಸಂಸ್ಕರಿಸಿ ನಂತರ 2ನೇ ತೊಟ್ಟಿಯಲ್ಲಿ ಶುದ್ಧೀಕರಣಗೊಂಡು ನೀರಿನಲ್ಲಿನ ಲವಣಾಂಶಗಳನ್ನು ಗಮನಿಸದ ಬಳಿಕ ನೀರನ್ನು ಹೊರಗೆ ಬಿಡಲಾಗುತ್ತಿದೆ. ಈ ಮಾಹಿತಿಯು ಸ್ವಯಂಚಾಲಿತವಾಗಿ ನೇರವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ರವಾನೆಯಾಗುವ ವ್ಯವಸ್ಥೆ ಮಾಡಲಾಗಿದೆ. ಇದರ ಪ್ರತಿ ಮಾಹಿತಿ ಕೂಡಾ ಸಂಗ್ರಹವಾಗುತ್ತಿದೆ.

ತ್ಯಾಜ್ಯ ಸಂಸ್ಕರಣಾ ಘಟಕದಿಂದ ಒಟ್ಟು 4.5 ಎಂಎಲ್‌ಡಿ ನೀರು ಹೊರಗೆ ಹೋಗುತ್ತಿದೆ. ಇದರ ಪ್ರಮಾಣ ಮಳೆಗಾಲದಲ್ಲಿ ಹೆಚ್ಚಾಗುತ್ತಿದೆ.

ಇಲ್ಲಿನ ತ್ಯಾಜ್ಯ ಸಂಸ್ಕರಣೆ ಘಟಕವು ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಘಟಕಕ್ಕೆ ಕೇಂದ್ರ ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯದ ಮೂವರು ಅಧಿಕಾರಿಗಳ ತಂಡವು ಭೇಟಿ ನೀಡಿ, ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು. ಈ ಮಾಹಿತಿಯನ್ನು ಪಡೆದ ಬಳಿಕೆ ಇಲ್ಲಿನ ಪುರಸಭೆಗೆ ತ್ಯಾಜ್ಯ ಸಂಸ್ಕರಣಾ ಘಟಕದ ಅಭಿವೃದ್ಧಿಗಾಗಿ ₹25 ಲಕ್ಷ ಅನುದಾನ ನೀಡಿದ್ದಾರೆ.

ತ್ಯಾಜ್ಯ ಸಂಸ್ಕರಣೆಯ ಘಟಕದ 2 ಭಾಗಗಳಲ್ಲಿ ನೀರಿನಲ್ಲಿ ಏರಿಯೇಟರ್‌ಗಳನ್ನು ಅಳವಡಿಸಲಾಗಿದೆ, ಇದರಿಂದ ನೀರಿಗೆ ಬೇಕಾದ ಆಕ್ಸಿಜನ್‌ ನೀಡುತ್ತದೆ.

ಈ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಹಳ್ಳದ ಮೂಲಕ ನದಿಗೆ ಬಿಡುವ ವ್ಯವಸ್ಥೆಯಿಂದ, ಆರೋಗ್ಯಯುತ ವಾತವರಣ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಇದರಿಂದ ರೋಗ ರುಜಿನಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲು ಸಹಕಾರಿಯಾಗಿದೆ.

ಹೂವಿನಹಡಗಲಿಯ ಪುರಸಭೆ ವ್ಯಾಪ್ತಿಯಲ್ಲಿನ ಒಳಚರಂಡಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು ಉತ್ತಮ ಘಟಕಗಳನ್ನು ನಿರ್ಮಿಸಿದ್ದು, ಉತ್ತಮ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಇದನ್ನು ಮೆಚ್ಚಿ ಕೇಂದ್ರ ಸರ್ಕಾರದಿಂದ ₹25 ಲಕ್ಷ ಅನುದಾನ ನೀಡಿದ್ದಾರೆ. ಇನ್ನು ಹೆಚ್ಚಿನ ಅಭಿವೃದ್ಧಿಗೆ ಸಹಕಾರಿಯಾಗಿದೆ ಎನ್ನುತ್ತಾರೆ ಹೂವಿನಹಡಗಲಿ ಪುರಸಭೆ ಮುಖ್ಯಾಧಿಕಾರಿ ಇಮಾಮಸಾಹೇಬ್‌.