ಪ್ರಜ್ವಲ್ ರೇವಣ್ಣ ಬಿಜೆಪಿ ಮುಖಂಡರ ಭೇಟಿ

| Published : Mar 21 2024, 01:09 AM IST

ಸಾರಾಂಶ

ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಕೆಲ ದಿನಗಳಿಂದ ಹಾಸನ ಜಿಲ್ಲೆಯ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ.

ಎಂಪಿ ಚುನಾವಣೆಯಲ್ಲಿ ನೆರವು ನೀಡುವಂತೆ ನಾಯಕರಲ್ಲಿ ಮನವಿ । ಪ್ರೀಂ ಗೌಡ ಭೇಟಿ ಇಲ್ಲ

ಕನ್ನಡಪ್ರಭ ವಾರ್ತೆ ಹಾಸನ

ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಂಡರೆ ಸಾಕು ಸಿಡುಕುತ್ತಿದ್ದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಕೆಲ ದಿನಗಳಿಂದ ಜಿಲ್ಲೆಯ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ.

ಇಡೀ ಜಿಲ್ಲೆಯಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದು ಶಾಸಕರಾಗಿದ್ದ ಪ್ರೀತಂ ಗೌಡ, ಸಂಸದ ಪ್ರಜ್ವಲ್ ಅವರನ್ನು ಟೀಕಿಸಿದಷ್ಟು ಬೇರೆಯವರು ಟೀಕಿಸಿಲ್ಲ. ಹಾಗಾಗಿ ಪ್ರಜ್ವಲ್‌ ರೇವಣ್ಣ ಅವರು ಪ್ರೀತಂ ಅವರನ್ನು ಹೊರತುಪಡಿಸಿ ಈವರೆಗೆ ಜಿಲ್ಲೆಯ ಹಲವು ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ತಮ್ಮನ್ನು ಬೆಂಬಲಿಸುವಂತೆ ಕೋರುತ್ತಿದ್ದಾರೆ.

ಈ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಪ್ರೀತಂ ಗೌಡಗೆ ತಿರುಗೇಟು ನೀಡುವ ಪ್ರಯತ್ನ ಮಾಡುತ್ತಿದ್ದಾರಾ ಎಂದು ಸಾರ್ವಜನಕ ವಲಯದಲ್ಲಿ ಪ್ರಶ್ನೆ ಮೂಡಿದೆ. ಐನೆಟ್ ವಿಜಯ್, ಕುಂ.ಆರ್. ಪ್ರಸಾದ್ ಗೌಡ, ಈಶ್ವರ್ ಸೇರಿದಂತೆ ಹಲವರ ಮನೆಗೆ ಹೋಗಿ ಮೈತ್ರಿ ಬಗ್ಗೆ ಮನವರಿಕೆ ಮಾಡಿ ಜೆಡಿಎಸ್ ಅಭ್ಯರ್ಥಿಗೆ ಸಹಕಾರ ನೀಡುವಂತೆ ಪ್ರಜ್ವಲ್‌ ಮನವಿ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಮೈತ್ರಿ ಅಭ್ಯರ್ಥಿ ಎಂದು ಅಧಿಕೃತ ಘೋಷಣೆ ಆಗಿರುವುದಿಲ್ಲ. ಹೈಕಮಾಂಡ್ ನಿರ್ದೇಶನಕ್ಕಾಗಿ ಕಾಯುತ್ತಿರುವ ಪ್ರೀತಂ ಗೌಡ ಮತ್ತು ಅವರ ಬೆಂಬಲಿಗರು ಸಂಸದರ ಈ ತಂತ್ರಗಾರಿಕೆಯು ತಲೆಕೆಡಿಸಿದೆ.

ಲೋಕಾಸಭೆ ಚುನಾವಣೆ ಸಮೀಪ ಇರುವಂತೆ ರಾಜಕೀಯ ವಲಯದಲ್ಲಿ ದಿನಕ್ಕೊಂದು ತಿರುವು ಕಾಣುತ್ತಿದ್ದು, ಹಾಸನದ ಬಿಜೆಪಿ ಮುಖಂಡರು ಹೈಕಮಾಂಡ್ ಆದೇಶವನ್ನು ಕಾಯುತ್ತಿದ್ದರೆ ಇನ್ನೊಂದು ಕಡೆ ಎಂಪಿ ಅಭ್ಯರ್ಥಿ ಎಂದು ಈಗಾಗಲೇ ಪ್ರಚಾರ ಕೈಗೊಂಡಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಚಾರದ ಬಿರುಸಿನಲ್ಲಿ ಈಗ ಬಿಜೆಪಿ ಮುಖಂಡರ ಮನೆಗೆ ಹೋಗಿ ಜನರ ಸೆಳೆಯುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಆದರೆ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡರ ಬಳಿ ಹೋಗದೆ ಅಂತರ ಕಾಯ್ದುಕೊಂಡಿದ್ದಾರೆ.

ಸಂಸದ ಪ್ರಜ್ವಲ್‌ರ ಭೇಟಿ ವೇಳೆ ಶಾಸಕ ಎಚ್.ಪಿ.ಸ್ವರೂಪ್, ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ ಇದ್ದರು.ಹಾಸನ ಜಿಲ್ಲೆಯ ವಿವಿಧ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ಸಂಸದ ಪ್ರಜ್ವಲ್‌ ರೇವಣ್ಣ.