ಭೀಮಾ ನದಿಗೆ ನಾರಾಯಣಪುರ ಡ್ಯಾಂನಿಂದ ನೀರು: ಕೃಷ್ಣ ಬಾಜಪೇಯಿ

| Published : Mar 21 2024, 01:08 AM IST

ಸಾರಾಂಶ

ಕುಡಿವ ನೀರಿಗೂ ಪರದಾಟ ಶುರುವಾಗಿರುವ ಭೀಮೆಯ ತೀರದಲ್ಲಿನ ಹಾಹಾಕಾರ ಶಮನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಇದೀಗ ಕೃಷ್ಣಾ ನದಿ ನೀರನ್ನೇ ಭೀಮಾ ನದಿಗೆ ಹರಿಸಲು ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕುಡಿವ ನೀರಿಗೂ ಪರದಾಟ ಶುರುವಾಗಿರುವ ಭೀಮೆಯ ತೀರದಲ್ಲಿನ ಹಾಹಾಕಾರ ಶಮನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಇದೀಗ ಕೃಷ್ಣಾ ನದಿ ನೀರನ್ನೇ ಭೀಮಾ ನದಿಗೆ ಹರಿಸಲು ಮುಂದಾಗಿದೆ. ಇದರಿಂದಾಗಿ ಗುರುವಾರದೊಳಗೆ ಭೀಮಾ ನದಿಗೆ ಕೃಷ್ಣಾ ನದಿಯ ನೀರು ಹರಿದು ಬರುವ ಸಾಧ್ಯತೆಗಳಿವೆ.

ಈ ಮುಂಚೆ ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ 3 ಟಿಎಂಸಿ ನೀರಿಗಾಗಿ ಕೋರಿ ನಾರಾಯಣಪುರ ಜಲಾಶಯ ಅಧಿಕಾರಿಗಳಿಗೆ ಪತ್ರ ಬರೆದು ಕೋರಿದ್ದರಾದರೂ ಅಲ್ಲಿಂದ ನಕಾರಾತ್ಮಕ ಸ್ಪಂದನೆ ಬಂದಿತ್ತು.

ಇದೀಗ ಭೀಮಾ ತೀರದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕಾವೇರುತ್ತಿರೋದರಿಂದ ಇದನ್ನರಿತು ಬಾಜಪೇಯಿ ಮತ್ತೆ ಜಲಸಂಪನ್ಮೂಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳು ಹಾಗೂ ಬೆಳಗಾವಿ ಪ್ರಾ. ಆಯುಕ್ತರಗೆ ನೀರು ಬಿಡುವ ಬಗ್ಗೆ ಪುನಃ ಮಾಡಿಕೊಂಡಿರುವ ಮನವಿಗೆ ಸ್ಪಂದನೆ ಸಿಕ್ಕಿದ್ದು ಇನ್ನೇನು ಬುಧವಾರ ರಾತ್ರಿಯೊಳಗೆ ಕೃಷ್ಣಯ ನೀರು ಭೀಮೆಯತ್ತ ಹರಿದು ಬರುವ ಸಾಧ್ಯತೆಗಳಿವೆ.

ಏತನ್ಮಧ್ಯೆ ಅಫಜಲ್ಪುರದಲ್ಲಿ ಶಾಸಕ ಎಂವೈ ಪಾಟೀಲರು ಹೇಳಿಕೆ ನೀಡಿದ್ದು, ತಾವು ಸಿಎಂ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ, ಡಿಸಿಎಂ ಶಿವಕುಮಾರ್‌ ಸೇರಿದಂತೆ ಎಲ್ಲರೊಂದಿಗೆ ಮಾತುಕತೆ ನಡೆಸಿ ಭೀಮಾ ತೀರದಲ್ಲಿನ ಜನ- ಜಾನುವಾರು ಸಂಕಷ್ಟ ವಿವರಿಸಿದ್ದೇನೆ. ಈಗಾಗಲೇ ಕಲಬುರಗಿ ಪ್ರಾದೇಶಿಕ ಆಯುಕ್ತರಾದ ಕೃಷ್ಣ ವಾಜಪೇಯಿ ಅವರು ಬೆಳಗಾವಿ ಆಯುಕ್ತರೊಂದಿಗೆ ಮಾತುಕತೆ ಮಾಡಿ ನೀರು ಬಿಡಲು ಕೋರಿದ್ದಾರೆ. ಹೀಗಾಗಿ ಈ ಬಗ್ಗೆ ತಮಗೆ ಆಶಾ ಭಾವನೆ ಇದ್ದು ನಾಳೆಯೊಳಗೆ ಭೀಮಾ ನದಿಗೆ ಕೃಷ್ಣೆಯ ನೀರು ಹರಿದು ಬರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಭೀಮೆಯಲ್ಲಿ ಹನಿ ನೀರೂ ಇಲ್ಲದೆ ಜನ- ಜಾನುವಾರು ಬವಣೆ ಪಡೋದು ನೋಡಲಾಗುತ್ತಿಲ್ಲ. ತಕ್ಷಣ ಮಹಾರಾಷ್ಟ್ರದಿಂದ 5 ಟಿಎಂಸಿ ನೀರು ಹರಿದು ಬರೋದು ಅಸಾಧ್ಯ. ಅನೇಕ ಅಕ್ರಮ ಯೋಜನೆಗಳನ್ನು ಮಾಡಿಕೊಂಡಿರುವ ಮಹಾರಾಷ್ಟ್ರ ಇದೀಗ ನೀರು ಬಿಡದೆ ಮೌನವಾಗಿದೆ. ನಾವು ಇದನ್ನು ಸರಕಾರದ ಹಂತದಲ್ಲಿ ಪ್ರಶ್ನಿಸಬೇಕಿದೆ ಎಂದು ಶಾಸಕ ಎಂ. ವೈ. ಪಾಟೀಲ್‌ ಹೇಳಿದ್ದಾರೆ.