ಈಡಿಗ, ಬಿಲ್ಲವ, ನಾಮಧಾರಿ, ಧೀವರ ಸೇರಿದಂತೆ ೨೬ ಪಂಗಡಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.6ರಿಂದ ಫೆ.12ರವರೆಗೆ ಚಿತ್ತಾಪುರದ ಕರದಾಳನಿಂದ ಬೆಂಗಳೂರಿನವರೆಗೆ ಸತತ ೪೧ ದಿನಗಳ ಕಾಲ ಸುಮಾರು ೭೦೦ ಕಿ.ಮೀ ಐತಿಹಾಸಿಕ ಪಾದಯಾತ್ರೆ ಮಾಡುತ್ತೇವೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಸೇವಾ ಟ್ರಸ್ಟ್ ಪೀಠಾಧಿಪತಿ ಶ್ರೀಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಈಡಿಗ, ಬಿಲ್ಲವ, ನಾಮಧಾರಿ, ಧೀವರ ಸೇರಿದಂತೆ ೨೬ ಪಂಗಡಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.6ರಿಂದ ಫೆ.12ರವರೆಗೆ ಚಿತ್ತಾಪುರದ ಕರದಾಳನಿಂದ ಬೆಂಗಳೂರಿನವರೆಗೆ ಸತತ ೪೧ ದಿನಗಳ ಕಾಲ ಸುಮಾರು ೭೦೦ ಕಿ.ಮೀ ಐತಿಹಾಸಿಕ ಪಾದಯಾತ್ರೆ ಮಾಡುತ್ತೇವೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಸೇವಾ ಟ್ರಸ್ಟ್ ಪೀಠಾಧಿಪತಿ ಶ್ರೀಪ್ರಣವಾನಂದ ಸ್ವಾಮೀಜಿ ತಿಳಿಸಿದರು. ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಕೂಡಲೇ ೫೦೦ ಕೋಟಿ.ರು ಬಿಡುಗಡೆ ಮಾಡಬೇಕು. ಕುಲಕಸುಬು ಕಳೆದುಕೊಂಡ ಕಲ್ಯಾಣ ಕರ್ನಾಟಕ ಭಾಗದ ಸಂತ್ರಸ್ತ ಈಡಿಗರಿಗೆ ೫ ಎಕರೆ ಜಮೀನು ಪ್ರತಿ ಕುಟುಂಬಕ್ಕೆ ಮಂಜೂರು ಮಾಡಬೇಕು ಎಂದು ಹೇಳಿದರು. ಸಮುದಾಯವನ್ನು ೨ಎ ಯಿಂದ ಎಸ್ಟಿ ಗೆ ಮೀಸಲಾತಿಗೆ ಸೇರಿಸುವುದಕ್ಕೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧದ ಎದುರು ಸ್ಥಾಪಿಸಬೇಕು. ರಾಜ್ಯದ ಈಡಿಗ ಸಮಾಜದ ಹಾಗೂ ಹಿಂದುಳಿದ ವರ್ಗದ ಭಕ್ತಿ ಶ್ರದ್ಧಾ ಕೇಂದ್ರವಾದ ಶ್ರೀಸಿಗಂಧೂರು ಚೌಡೇಶ್ವರಿ ದೇವಸ್ಥಾನದ ವಿರುದ್ಧ ಹೂಡಿದ ಮೊಕದ್ದಮೆಗಳನ್ನು ಕೂಡಲೇ ಹಿಂತೆಗೆದುಕೊಂಡು ದೇವಸ್ಥಾನಕ್ಕೆ ಸೂಕ್ತ ಭದ್ರತೆ ನೀಡಿ ಕ್ಷೇತ್ರಕ್ಕೆ ಅಗತ್ಯ ಭೂಮಿ ಮಂಜೂರು ಮಾಡಬೇಕು ಎಂದರು.ಮದ್ಯ ಮಾರಾಟದಲ್ಲಿ ಸಮಾಜದ ಈಡಿಗ ಸೇರಿದಂತೆ ೨೬ ಪಂಗಡಗಳಿಗೆ ಶೇ.೫೦% ರಷ್ಟು ಮೀಸಲಾತಿ ನೀಡಬೇಕು. ಕೋಟಿ ಚೆನ್ನಯ್ಯರ ಜನ್ಮಸ್ಥಳ ಮತ್ತು ಐಕ್ಯಸ್ಥಳ ಅಭಿವೃದ್ಧಿಗಾಗಿ ಕೋಟಿ ಚೆನ್ನಯ್ಯ ಅಭಿವೃದ್ಧಿ ಪ್ರಾಧಿಕಾರಕ್ಕ ಪ್ರತಿ ಬಜೆಟ್‌ನಲ್ಲಿ ಕನಿಷ್ಠ ೧೦೦ ಕೋಟಿ.ರು ಮಂಜೂರು ಮಾಡಬೇಕು. ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯದಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪಿಸುವುದು ಮತ್ತು ರಾಜ್ಯದ ಒಂದು ವಿಶ್ವ ವಿದ್ಯಾಲಯಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಘೋಷಣೆ ಮತ್ತು ಅನುಭವ ಮಂಟಪದಲ್ಲಿ ಈಡಿಗ ಜನಾಂಗದ ಶರಣರಾದ ಹೆಂಡದ ಮಾರಯ್ಯನವರ ಜಯಂತಿ ಆಚರಣೆಯನ್ನು ಸರಕಾರ ಘೋಷಣೆ ಮಾಡುವಂತೆ ಒತ್ತಾಯಿಸಿದರು. ಆಶ್ರಯ ಮತ್ತು ವಸತಿ ಯೋಜನೆಯಲ್ಲಿ ಸಮಾಜಕ್ಕೆ ಪ್ರತ್ಯೇಕವಾಗಿ ೨೫ಸಾವಿರ ಮನೆ ಮಂಜೂರು ಮಾಡಬೇಕು. ಬ್ರಹ್ಮಶ್ರೀ ಗುರುಭವನ ನಿರ್ಮಿಸುವುದಕ್ಕೆ ಭೂಮಿ ಮಂಜೂರು ಮಾಡಬೇಕು. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಣೆ ಮಾಡಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕಿದೆ. ಸಮುದಾಯದ ಟ್ರಸ್ಟ್‌ವೊಂದಕ್ಕೆ ಮೆಡಿಕಲ್ ಕಾಲೇಜ್ ಮಂಜೂರಾತಿ ಮಾಡುವುದು ಶಿವಮೊಗ್ಗ, ಮಂಗಳೂರು, ಕಾರವಾರ, ಉಡುಪಿ ಪ್ರತಿ ಜಿಲ್ಲೆಯಲ್ಲಿ ೫ ಎಕೆರೆ ಜಮೀನು ಮಾಡಿ ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕಿದೆ. ನಮ್ಮ ಬೇಡಿಕೆ ಈಡೇರಿಕೆಯನ್ನು ಈಡೇರಿಸುಂತೆ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.ಸುದ್ದಿಗೋಷ್ಟಿಯಲ್ಲಿ ರಾಷ್ಟ್ರೀಯ ಈಡಿಗ ಮಹಾಸಭಾದ ಅಧ್ಯಕ್ಷ ರಂಗಶಾಮಯ್ಯ, ಪಾದಯಾತ್ರೆ ಮುಖ್ಯ ಸಂಚಾಲಕ ಲಕ್ಷ್ಮೀನರಸಯ್ಯ, ಮಹಿಳಾ ಅಧ್ಯಕ್ಷೆ ಪ್ರಭಾ, ಮುಖಂಡ ಹನುಮಂತರಾಜು ಉಪಸ್ಥಿತರಿದ್ದರು.