ತಾಲೂಕಿನಲ್ಲಿ ಮಂಗಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಹಾಗೂ ಪಲ್ಸ್ ಪೋಲಿಯೋ ಕುರಿತು ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ಸೋಮವಾರ ಅಧಿಕಾರಿಗಳ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸಾಗರ

ತಾಲೂಕಿನಲ್ಲಿ ಮಂಗಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಹಾಗೂ ಪಲ್ಸ್ ಪೋಲಿಯೋ ಕುರಿತು ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ಸೋಮವಾರ ಅಧಿಕಾರಿಗಳ ಸಭೆ ನಡೆಸಿದರು.

ತಾಲೂಕಿನಲ್ಲಿ ಇಲ್ಲಿಯವರೆಗೆ ೨೭೪ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಿದ್ದು, ಈತನಕ ಯಾವುದೇ ಸೋಂಕು ಕಂಡು ಬಂದಿಲ್ಲ. ಹೊಸನಗರ ತಾಲೂಕಿನಲ್ಲಿ ೧೬೯ ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಿದ್ದು ೮ ಪ್ರಕರಣ ಪತ್ತೆಯಾಗಿದೆ ಎಂದು ಸಭೆಗೆ ಎಸಿ ಮಾಹಿತಿ ನೀಡಿದರು.

ಸಾಗರ ತಾಲೂಕಿನಲ್ಲಿ ಕೆಎಫ್ಡಿ ಸಂಬಂಧ ಕಟ್ಟೆಚ್ಚರ ವಹಿಸಲಾಗಿದೆ. ಹೊಸನಗರ ತಾಲೂಕಿನ ಸೋನಲೆ ವ್ಯಾಪ್ತಿಯಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಈ ಪ್ರಾಥಮಿಕ ಕೇಂದ್ರವ್ಯಾಪ್ತಿಯನ್ನು ಹಾಟ್ಸ್ಪಾಟ್ ಎಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಇನ್ನಷ್ಟು ಜನರ ರಕ್ತಮಾದರಿ ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಾಗರ ಉಪವಿಭಾಗೀಯ ಅಸ್ಪತ್ರೆಯಲ್ಲಿ ಮಂಗನ ಕಾಯಿಲೆಗಾಗಿ ೧೦ ಹಾಸಿಗೆಗಳ ವಿಶೇಷ ಘಟಕ ಪ್ರಾರಂಭಿಸಲಾಗಿದೆ. ಕೆಲವು ಪ್ರಮುಖ ಸ್ಥಳಗಳಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ನವೆಂಬರ್‌ನಿಂದ ಜೂನ್‌ವರೆಗೆ ಜ್ವರ, ವಾಂತಿ, ತಲೆನೋವು, ಮೈಕೈನೋವು ಇನ್ನಿತರೆ ಸೋಂಕು ಕಂಡು ಬಂದರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಬೇಕು. ಎರಡು ಮೂರು ದಿನಗಳಲ್ಲಿ ಕಡಿಮೆಯಾಗದೆ ಇದ್ದರೆ ಉಪವಿಭಾಗೀಯ ಅಸ್ಪತ್ರೆಗೆ ಚಿಕಿತ್ಸೆಗೆ ಒಳಪಡಬೇಕು. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ತಪಾಸಣಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಪವಿಭಾಗೀಯ ಕೇಂದ್ರವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೋ ಹಾಕುವ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡಲಾಗಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕಿಸುವ ಮೂಲಕ ಮಕ್ಕಳನ್ನು ಅಂಗವೈಕಲ್ಯದಿಂದ ದೂರ ಮಾಡಬೇಕು. ಪೋಲಿಯೋ ಹನಿ ಹಾಕಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ತಹಸೀಲ್ದಾರ್ ರಶ್ಮಿ ಜೆ.ಎಚ್., ಕಾರ್ಯನಿರ್ವಾಹಣಾಧಿಕರಿ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದಸ್ವಾಮಿ, ಟಿಎಚ್ಓ ಹರ್ಷವರ್ಧನ್, ಡಾ.ರವೀಂದ್ರ, ಡಾ. ನಾಗರಾಜ ನಾಯ್ಕ್, ಡಾ. ಸುರೇಶ್, ದೇವರಾಜ್, ರಮೇಶ್ ಟಿ.ಪಿ., ಅರಣ್ಯ, ಪಶುಪಾಲನಾ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.