ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನ್ಯಾಯಕ್ಕಾಗಿ ನ್ಯಾಯಾಲಯದ ಮುಂದೆ ಕನ್ನಡದಲ್ಲಿ ದಾವೆ ಸಿದ್ಧಪಡಿಸಿ ಸಲ್ಲಿಸಿದರೆ ಅನಗತ್ಯವಾಗಿ ಉಂಟಾಗುವ ಗೊಂದಲ ನಿವಾರಣೆಯಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ರೋಣ್ ವಾಸುದೇವ ಅಭಿಪ್ರಾಯ ಪಟ್ಟರು.ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ, ಸಿವಿಲ್ ಪ್ರಕರಣಗಳಲ್ಲಿ ಡ್ರಾಪ್ಟಿಂಗ್ ಕೌಶಲ್ಯ ಕುರಿತು ಉಪನ್ಯಾಸ ನೀಡಿದ ಅವರು, ಸಿವಿಲ್ ಪ್ರಕರಣಗಳ ಕರಡು ರಚನೆಗೆ ಭಾಷಾ ಕೌಶಲ್ಯ ಅತಿ ಮುಖ್ಯವಾಗಿದೆ. ಸರಳವಾಗಿ ಮಾತೃಭಾಷೆ ಕನ್ನಡದಲ್ಲಿ ಪ್ರಕರಣದ ಕರಡು ಸಿದ್ಧಪಡಿಸಿದರೆ ಕಕ್ಷಿಗಾರನಿಗೆ ನೆರವಾದಂತಾಗುತ್ತದೆ ಎಂದರು.
ಆಸ್ತಿ ಹಕ್ಕಿಗಾಗಿ ಕಕ್ಷಿದಾರರು ಸಿವಿಲ್ ದಾವೆಗಳನ್ನು ನ್ಯಾಯಾಲಯಗಳಲ್ಲಿ ಹೂಡುತ್ತಾರೆ. ಕ್ರಿಮಿನಲ್ ಪ್ರಕರಣಗಳಲ್ಲಿ ನೇರವಾಗಿ ಕಾಯ್ದೆಗಳನ್ನು ಉಲ್ಲೇಖಿಸಿ ಕಕ್ಷಿದಾರರ ಪ್ರಕರಣದ ಕರಡು ಸಿದ್ದಪಡಿಸಬಹುದು. ಆದರೆ ಸಿವಿಲ್ ಪ್ರಕರಣಗಳಲ್ಲಿ ಕಾಯ್ದೆಗಳ ಉಲ್ಲೇಖಿಸುವುದರಿಂದ ಗೊಂದಲ ಹೆಚ್ಚಾಗುತ್ತದೆ. ಇದರ ಬದಲಿಗೆ ಸರಳವಾಗಿ ಕಕ್ಷಿದಾರರ ಪರವಾದ ವಿಷಯಗಳನ್ನು ಕರಡಿನಲ್ಲಿ ಸ್ಪಷ್ಟಪಡಿಸಬೇಕು. ಕ್ಲಿಷ್ಟಕರ ಶಬ್ದಗಳನ್ನು ಬಳಸಬಾರದು. ಅಸಲು ದಾವೆ ಮಾಹಿತಿಗಳನ್ನು ಕರಡಿನಲ್ಲಿ ನೀಡಿದರೆ ಸಾಕು, ಅನಗತ್ಯವಾಗಿ ದೊಡ್ಡ ಕರಡು ರಚನೆ ಮಾಡಬಾರದು. ವ್ಯಾಜ್ಯದ ಕರಡು ನ್ಯಾಯಧೀಶರು ಸುಲಭವಾಗಿ ಅರ್ಥವಾದರೆ ಪ್ರಕರಣಗಳಲ್ಲಿ ಬೇಗ ಪರಿಹಾರದ ದೊರಕುವುದು. ಕಕ್ಷಿದಾರರ ಸಮಯವು ವ್ಯರ್ಥವಾಗುವುದಿಲ್ಲ ಎಂದು ರೋಣ್ ವಾಸುದೇವ ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದಿಂದ ಜಿಲ್ಲೆಯಲ್ಲಿನ ದುರ್ಬಲ ಹಾಗೂ ನಿಮ್ನ ವರ್ಗದವರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ಪೊಕ್ಸೋ, ಬಾಲ್ಯವಿವಾಹ ಸೇರಿದಂತೆ ಸಾಮಾಜಿಕ ಪಿಡುಗುಗಳ ಕುರಿತು ಪ್ರಸಕ್ತ ವರ್ಷದಲ್ಲಿ 300 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 3 ಲೋಕ ಅದಾಲತ್‍ನಲ್ಲಿ 11,744 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.
ಇದರ ಹೊರತಾಗಿ ಜಿಲ್ಲಾ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆಯುವಂತೆ ಕಾಳಜಿ ವಹಿಸಲಾಗಿದೆ. ಬಸ್ ಸಂಪರ್ಕ ಕಾಣದ ಜೆಎನ್‌ಕೋಟೆ ಗೊಲ್ಲರಹಟ್ಟಿ ಗ್ರಾಮಕ್ಕೆ ಬಸ್ ಸೌಲಭ್ಯ ದೊರಕಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರ ಪ್ರಮುಖ ಪಾತ್ರ ವಹಿಸಿದೆ. ಪ್ರಾಧಿಕಾರದೊಂದಿಗೆ 91 ಪ್ಯಾನಲ್ ವಕೀಲರು, 8 ಕಾನೂನು ಅಭಿರಕ್ಷಕರು ಹಾಗೂ 90 ನ್ಯಾಯಿಕ ಸಹಾಯಕರು ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಮಹೇಶ್ವರಪ್ಪ, ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವೀರಣ್ಣ ಸೋಮಶೇಖರ್, ಗಂಗಾಗಧರ ಚನ್ನಬಸಪ್ಪ ಹಡಪದ್, ಮಮತ.ಡಿ, ಚೈತ್ರ ಎ.ಎಂ, ಉಜ್ವಲ ವೀರಣ್ಣ ಸಿದ್ದಣ್ಣವರ್, ರಶ್ಮಿ ಎಸ್ ಮರಡಿ, ಪೂಜಾ ಬೆಳಕೇರಿ, ನಿಖಿತಾ ಎಸ್ ಅಕ್ಕಿ, ಆರ್.ಸಹನಾ, ವಕೀಲರ ಸಂಘದ ಉಪಾಧ್ಯಕ್ಷೆ ಕೆ.ಎಸ್.ಸಾವಿತ್ರಮ್ಮ, ಪ್ರಧಾನ ಕಾರ್ಯದರ್ಶಿ ಹೆಚ್.ಓ.ಜಗದೀಶ್ ಗುಂಡೇರಿ ಸೇರಿದಂತೆ ವಕೀಲರು, ಕಾನೂನು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))