ಪುತ್ತೂರು: ಪುತ್ತೂರು ತಾಲೂಕಿನ ಮುಂಡೂರು ಬಾರಿಕೆ ಎಂಬಲ್ಲಿ ಇತ್ತೀಚೆಗೆ ಅಪರೂಪದ ‘ಪ್ರೇತ ವಿವಾಹ’ ನಡೆಯಿತು. ಈ ಹಿಂದೆ ಮೃತಪಟ್ಟ ಆನಂದ ಮತ್ತು ಸರೋಜಾ ಎಂಬವರ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದ ದೋಷಗಳು ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಈ ವಿವಾಹ ನಡೆಸಲಾಯಿತು

ಮೃತ ಆನಂದ ಅವರ ಕುಟುಂಬದಲ್ಲಿ ಕಳೆದ ಹಲವು ಸಮಯದಿಂದ ಸಂತಾನ ಭಾಗ್ಯದ ಕೊರತೆ, ವಿವಾಹ ತಡೆ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿದ್ದು, ಈ ಕುಟುಂಬದ ಕಷ್ಟಗಳಿಗೆ ಕಾರಣವೇನು ಎಂದು ಅರಿಯಲು ಜ್ಯೋತಿಷಿಗಳ ಸಲಹೆಯಂತೆ ಪ್ರಶ್ನಾ ಚಿಂತನೆ ನಡೆಸಲಾಯಿತು. ಪ್ರಶ್ನಾ ಚಿಂತನೆಯಲ್ಲಿ ಮೃತಪಟ್ಟ ಆನಂದ ಅವರಿಗೆ ವಿವಾಹವಾಗದೆ ಆ ಆತ್ಮ ಅತೃಪ್ತವಾಗಿದೆ. ಇದರಿಂದಾಗಿ ಕುಟುಂಬದಲ್ಲಿ ಇಂತಹ ಹಲವು ದೋಷಗಳು ಕಂಡು ಬರುತ್ತಿದೆ ಎಂದು ತಿಳಿದು ಬಂದಿತ್ತು. ಈ ದೋಷ ಪರಿಹರಿಸಿ, ಮೃತ ಆತ್ಮಗಳಿಗೆ ಸದ್ಗತಿ ದೊರಕಿಸಿಕೊಡಲು ಕುಟುಂಬಸ್ಥರು ಈ ವಿವಾಹಕ್ಕೆ ನಿರ್ಧರಿಸಿದರು. ಅದರಂತೆ ಆನಂದ ಕುಟುಂಬದಲ್ಲೇ ಸೋದರ ಸಂಬಂಧದಲ್ಲಿ ಮಾವನ ಮಗಳು ಸರೋಜಾ ಅವರೊಂದಿಗೆ ಆನಂದ ಅವರ ವಿವಾಹ ಮಾಡಲಾಯಿತು. ಧರ್ಮಪಾಲ ಶೇಣಿ ಪೌರೋಹಿತ್ಯ: ಪ್ರೇತ ವಿವಾಹದಲ್ಲಿ ಅನುಭವವಿರುವ ಧರ್ಮಪಾಲ ಶೇಣಿ ಅವರು ವಿವಾಹದ ಪೌರೋಹಿತ್ಯ ವಹಿಸಿದ್ದರು. ಕುಟುಂಬದ ಸದಸ್ಯರು ಮೃತ ಆನಂದ ಮತ್ತು ಸರೋಜಾ ಅವರ ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದರು. ತುಳು ನಾಡಿನ ಪ್ರೇತ ವಿವಾಹ: ಪ್ರೇತ ವಿವಾಹ (ಕುಲೆತ ಮದಿಮೆ)ದಲ್ಲಿ ಜೀವಂತ ವ್ಯಕ್ತಿಗಳ ಮದುವೆಯ ರೀತಿಯಲ್ಲೇ ನಡೆಯುತ್ತದೆ. ಅರಂಭದಲ್ಲಿ ಹುಡುಗಿ ನೋಡುವ ಕಾರ್ಯ, ವಿವಾಹ ನಿಶ್ವಿತಾರ್ಥ ನಡೆಯುತ್ತದೆ. ಆ ಬಳಿಕ ಮದುವೆ ಮದರಂಗಿ ನಂತರ ಮದುವೆ ನಡೆಯುತ್ತದೆ. ಮದುವೆ ದಿನ ಮದುಮಗಳಿಗೆ ಹಾಗೂ ಮದುಮಗನಿಗೆ ಹೊಸ ಬಟ್ಟೆ ತೊಡಿಸಲಾಗುತ್ತದೆ. ಆರಂಭದಲ್ಲಿ ಪೂ ಸೀರೆ (ಹೂ ಸೀರೆ ) ಬದಲಿಸುವ ಕಾರ್ಯ ಆಗುತ್ತದೆ. ನಂತರ ಎರಡು ಮಣ್ಣಿನ ಪಾತ್ರೆಗಳಿಗೆ( ತಲೆಯ ಗಾತ್ರದ್ದು) ಗಂಡು, ಹೆಣ್ಣಿನ ರೀತಿ ಕಣ್ಣು, ಬಾಯಿ ರಚಿಸಲಾಗುತ್ತದೆ. ಈ ರೀತಿಯ ಮಾನವ ಪ್ರೇತದ ರೂಪಗಳಿಗೆ ಧಾರೆ ಎರೆಯುವಲ್ಲಿಂದ ಹಿಡಿದು ಮಾಂಗಲ್ಯ ಧಾರಣೆ ನಡೆಯುತ್ತವೆ. ಕೊನೆಗೆ ಈ ಬೊಂಬೆಗಳನ್ನು ಮನೆಯೊಳಕ್ಕೆ ಕೊಂಡೊಯ್ದು ಕೆಲವೊಂದು ಕಟ್ಟು ಕಟ್ಟಳೆಗಳು ನಡೆಯುತ್ತದೆ. ಆ ಬಳಿಕ ಭೋಜನ ವ್ಯವಸ್ಥೆ ಮಾಡಲಾಗುತ್ತದೆ.