ಸಾರಾಂಶ
ಕನಕಪುರ: ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಹಾಗೂ ನ್ಯಾಯಾಲಯದ ತಡೆಯಾಜ್ಞೆ ಕಡೆಗಣಿಸಿ ತಮಗಿಷ್ಟ ಬಂದ ರೀತಿಯಲ್ಲಿ ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡುವ ಮೂಲಕ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಪಟ್ಟಭದ್ರ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಜಮೀನು ಮಾಲೀಕ ನಟರಾಜು ಆರೋಪಿಸಿದ್ದಾರೆ. ಕನಕಪುರ ಯೋಜನಾ ಪ್ರಾಧಿಕಾರದ ಕಚೇರಿ ಮುಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಸರ್ವೆ ನಂ 109,110,11,112ಕ್ಕೆ ಒಳಪಟ್ಟಂತೆ ಖಾಸಗಿ ವ್ಯಕ್ತಿಗಳು ಸೇರಿಕೊಂಡು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಖಾಸಗಿ ಲೇಔಟ್ ನಿರ್ಮಾಣ ಮಾಡಿದ್ದು ಸರ್ಕಾರದ ನಿಯಮಾನುಸಾರ ಲೇಔಟ್ ಗೆ ತೆರಳಲು ರಸ್ತೆ ಇಲ್ಲದಿದ್ದರೂ ಕೆಲ ಪಟ್ಟಭದ್ರ ವ್ಯಕ್ತಿಗಳ ಪ್ರಭಾವಕ್ಕೆ ಮಣಿದೋ ಅಥವಾ ಇನ್ನಿತರೆ ಆಮಿಷಕ್ಕೆ ಒಳಗಾಗಿ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಇದರಲ್ಲಿ ಅಡಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಮಗ್ಗುಲಲ್ಲೆ ನಿರ್ಮಾಣ ಮಾಡಿರುವ ಈ ಖಾಸಗಿ ಬಡಾವಣೆಗೆ ತೆರಳಲು ರಸ್ತೆ ಇರದ ಕಾರಣನಮ್ಮ ಜಮೀನಿಗೆ ತೆರಳಲು ನಾವು ನಿರ್ಮಾಣ ಮಾಡಿಕೊಂಡಿರುವ ರಸ್ತೆಯಲ್ಲೆ ತೆರಳುತ್ತಿದ್ದು ಈ ಬಗ್ಗೆ ಹಲವು ಬಾರಿ ನಾನು ವಿರೋಧ ವ್ಯಕ್ತಪಡಿಸಿದ್ದರೂ ಕ್ಯಾರೆ ಎನ್ನದೆ ನನ್ನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದು ಈ ಬಗ್ಗೆ ಪೊಲೀಸರಿಗೆ ದೂರನ್ನು ನೀಡಿದ್ದರೂ ಏನು ಪ್ರಯೋಜನವಾಗಿಲ್ಲ. ಈ ಸಂಬಂಧ ಈಗಾಗಲೇ ಜೆಎಂಎಫ್‌ಸಿ ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಸಹ ಅದನ್ನು ಕಡೆಗಣಿಸಿರುವ ಅಧಿಕಾರಿಗಳು ಲೇಔಟ್ ನಿರ್ಮಾಣಕ್ಕೆ ನಿರ್ಬಂಧ ಹೇರಬೇಕು. ಹಾಗೂ ನನ್ನ ಸ್ವಂತ ರಸ್ತೆಯನ್ನು ಬಳಸದಂತೆ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಲೇಔಟ್ ನಿರ್ಮಾಣಕ್ಕೆ ಮುಂದಾಗಿರುವ ಖಾಸಗಿ ವ್ಯಕ್ತಿಗಳು ಹಾಗೂ ಕನಕಪುರ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
;Resize=(128,128))
;Resize=(128,128))
;Resize=(128,128))