ವಿಶೇಷಚೇತನರ ಸ್ವಾಭಿಮಾನದ ಬದುಕಿಗಾಗಿ ಸರ್ಕಾರದ ಸವಲತ್ತು ಅಗತ್ಯ: ಶಾಸಕ ಇಕ್ಬಾಲ್ ಹುಸೇನ್

| Published : Dec 04 2024, 12:33 AM IST

ವಿಶೇಷಚೇತನರ ಸ್ವಾಭಿಮಾನದ ಬದುಕಿಗಾಗಿ ಸರ್ಕಾರದ ಸವಲತ್ತು ಅಗತ್ಯ: ಶಾಸಕ ಇಕ್ಬಾಲ್ ಹುಸೇನ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ 19,183 ವಿಕಲಚೇತನರಿದ್ದು, ಅವರಲ್ಲಿ 16,644 ಫಲಾನುಭವಿಗಳಿಗೆ ಮಾಸಿಕ ಪಿಂಚಣಿ ಸಿಗುತ್ತಿದೆ. 15,012 ಯುಡಿಐಡಿ ಕಾರ್ಡ್ ವಿತರಣೆ ಆಗಿದೆ. ಮಾಸಿಕ ಪೋಷಣಾ ಭತ್ಯೆ, ಸಾರಿಗೆ ಇಲಾಖೆಯ ಮುಖಾಂತರ ರಿಯಾಯಿತಿ ದರದಲ್ಲಿ ಬಸ್‌ಪಾಸ್ ಸೌಲಭ್ಯ, ಶೇ. 5ರ ಮೀಸಲಾತಿ ಅನುದಾನ ಬಳಕೆ ಹಾಗೂ ವಿವಿಧ ಇಲಾಖೆಗಳ ಮೂಲಕ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಇಲಾಖೆ ಶ್ರಮಿಸುತ್ತಿದೆ .

ಕನ್ನಡಪ್ರಭ ವಾರ್ತೆ ರಾಮನಗರ

ಸಮಾಜದಲ್ಲಿ ವಿಶೇಷಚೇತನರ ಬಗೆಗಿನ ಕೀಳರಿಮೆ ಮತ್ತು ತಾತ್ಸಾರ ಮನೋಭಾವವನ್ನು ತೆಗೆದು ಹಾಕಿ ಅವರೆಲ್ಲರೂ ಸ್ವಾಭಿಮಾನದಿಂದ ಬದುಕು ನಡೆಸಲು ಸರ್ಕಾರದ ಸವಲತ್ತು ಒದಗಿಸಿ ಉತ್ತೇಜನ ನೀಡುವ ಕೆಲಸ ಮಾಡಬೇಕು ಎಂದು ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮೀಣ ಪುನರ್ವಸತಿ ಯೋಜನೆಯ ಕಾರ್ಯಕರ್ತರು ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ- 2024 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶೇಷ ಚೇತನರು ಎಂದಾಕ್ಷಣ ಕೈಲಾಗದವರು ಎಂರ್ಥವಲ್ಲ. ಅವರಲ್ಲಿಯೂ ವಿಶೇಷ ಸಾಮರ್ಥ್ಯವಿರುತ್ತದೆ. ಸೋಮಾರಿಗಳಾಗದೇ ನಿರಂತರ ಶ್ರಮ ವಹಿಸುವ ಮೂಲಕ ಸಾಧನೆಯ ಹಾದಿ ಹಿಡಿಯಬೇಕು. ಶೇ.75ಕ್ಕೂ ಹೆಚ್ಚು ವಿಕಲಾಂಗರಾದ ಎಷ್ಟೋ ಮಂದಿ ಕೆಎಎಸ್, ಐಎಎಸ್ ಉನ್ನತ ಹುದ್ದೆ ಅಲಂಕರಿಸಿದ್ದು ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಅಂತಹ ಜೀವನಾದರ್ಶಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡರೆ ಜೀವನದಲ್ಲಿ ಸಾಧನೆಯೇ ನಿಮ್ಮನ್ನು ಹಿಂಬಾಲಿಸುತ್ತದೆ ಎಂದರು.

ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ನಾನು ಶಾಸಕನಾದ ನಂತರ ತಮಗೆ ಮೀಸಲಿರಿಸಿದ ಶೇ.5ರ ಅನುದಾನದಲ್ಲಿ 20 ತ್ರಿ-ಚಕ್ರ ವಾಹನಗಳನ್ನು ವಿತರಣೆ ಮಾಡಿದ್ದೇನೆ. ರಾಜ್ಯ ಸರ್ಕಾರ ತಮಗೆ ಸವಲತ್ತು ಮತ್ತು ವಿಶೇಷ ಸಾಲ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳನ್ನು ಸದುಪಯೋಗಪಡಿಸಿ ಕೊಂಡು ಸ್ವಾವಲಂಬಿ ಬದುಕು ಸಾಧಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ, ವಿಶೇಷ ಚೇತನರ ಪರವಾಗಿ ನಿಲ್ಲುವ ಅಧಿಕಾರಿಗಳು ಬೇಕೆಂಬ ಶಾಸಕರ ಆಶಯದಂತೆ ಅವರಿಗೆ ಸಿಗಬೇಕಾದ ಯೋಜನೆಗಳು, ಸವಲತ್ತುಗಳನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸಲು ಜಿಲ್ಲಾಡಳಿತ ಸಿದ್ಧವಿದೆ. ಅಂಗವಿಕಲತೆ ಇರಬಹುದು ಆದರೆ ಬುದ್ದಿಶಕ್ತಿಯಿದ್ದು ನೀವು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಬೌದ್ದಿಕ ಶಕ್ತಿಯಿಂದ ಗುರುತಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ವಿ. ಜ್ಯೋತಿ ಮಾತನಾಡಿ, ಜಿಲ್ಲೆಯಲ್ಲಿ 19,183 ವಿಕಲಚೇತನರಿದ್ದು, ಅವರಲ್ಲಿ 16,644 ಫಲಾನುಭವಿಗಳಿಗೆ ಮಾಸಿಕ ಪಿಂಚಣಿ ಸಿಗುತ್ತಿದೆ. 15,012 ಯುಡಿಐಡಿ ಕಾರ್ಡ್ ವಿತರಣೆ ಆಗಿದೆ. ಮಾಸಿಕ ಪೋಷಣಾ ಭತ್ಯೆ, ಸಾರಿಗೆ ಇಲಾಖೆಯ ಮುಖಾಂತರ ರಿಯಾಯಿತಿ ದರದಲ್ಲಿ ಬಸ್‌ಪಾಸ್ ಸೌಲಭ್ಯ, ಶೇ. 5ರ ಮೀಸಲಾತಿ ಅನುದಾನ ಬಳಕೆ ಹಾಗೂ ವಿವಿಧ ಇಲಾಖೆಗಳ ಮೂಲಕ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಇಲಾಖೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ಸಿ.ಪದ್ಮರಾಜ್, ಪುನರ್ವಸತಿ ಕೇಂದ್ರದ ಅಸ್ಲಾಂ ಪಾಷ ಮಾತನಾಡಿದರು. ವೇದಿಕೆಯಲ್ಲಿ ಮಹಿಳಾ ಮಕ್ಕಳ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರಸನ್ನ, ಅಕ್ರೆಟಿವ್ ಸಂಸ್ಥೆಯ ಅಧ್ಯಕ್ಷ ಸಿದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಡಿಸಿ - ಸಿಇಒ ವಿರುದ್ಧ ಶಾಸಕರ ಅಸಮಾಧಾನ:

ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಿ ಅವರಲ್ಲಿ ಜಾಗೃತಿ ಮೂಡಿಸಿ ಸಮಾನ ಅವಕಾಶ, ಸೌಲಭ್ಯ ಕಲ್ಪಿಸುವುದು ಸೇರಿದಂತೆ ಸಮಾಜದಲ್ಲಿ ಸಮಾನವಾಗಿ ಕಾಣಬೇಕೆಂಬ ಅಶಯದಿಂದ ದಿನಾಚರಣೆ ಆಚರಿಸಲಾಗುತ್ತಿದೆ. ಅಂತಹ ಕಾರ್ಯಕ್ರಮದಲ್ಲಿ ಅಧಿಕಾರಿಗಳೇ ಆಗಲಿ, ನಮ್ಮ ಚುನಾಯಿತ ಪ್ರತಿನಿಧಿಗಳೇ ಆಗಲಿ ವಿಕಲಚೇತನರಿಗೆ ಧ್ವನಿಯಾಗದವರ ಬಗ್ಗೆ ನಾನು ಸಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಜೊತೆಗೆ ಚುನಾಯಿತ ಪ್ರತಿನಿಧಿಗಳು ಗೈರಾಗಿದ್ದಕ್ಕೆ ಶಾಸಕ ಎಚ್.ಎ.ಇಕ್ಬಾಲ್‌ ಹುಸೇನ್ ತಮ್ಮ ಅಧ್ಯಕ್ಷೀಯ ಭಾಷಣದ ಪ್ರಾರಂಭದಲ್ಲಿ ಅಸಮಾಧಾನ ಹೊರ ಹಾಕಿದರು.

‘ವಿಶೇಷ ಚೇತನರಿಗೆ ಮೀಸಲಿಟ್ಟಿರುವ ಅನುದಾನವನ್ನು ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಸಿಲ್ಲ. ಈ ಬಗ್ಗೆ ನಿಮಗೆ ತಪ್ಪು ಮಾಹಿತಿ ಬೇಡ. ನಾವು ನಿಮ್ಮ ಅನುದಾನವನ್ನು ನಿಮ್ಮ ಕಲ್ಯಾಣ ಕಾರ್ಯಕ್ರಮಗಳಿಗಷ್ಟೆ ಬಳಸುತ್ತಿದ್ದೇವೆ, ನಿಮ್ಮ ಸಮಸ್ಯೆಗಳಿಗೆ ಸದನದಲ್ಲಿ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ.’

ಇಕ್ಬಾಲ್ ಹುಸೇನ್,ಶಾಸಕ