ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸದಂತೆ ನಿಷೇಧ ಹೇರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

 ಬೆಂಗಳೂರು : ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸದಂತೆ ನಿಷೇಧ ಹೇರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮಕ್ಕೆ ಸಿಎಂ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರದ ನಡೆಗೆ ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳಿಂದ ತೀವ್ರ ವಿರೋಧ, ಆಕ್ರೋಶ ವ್ಯಕ್ತವಾಗುತ್ತಿದೆ.

ರಾಜ್ಯದ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಸಂಘಟನೆ ಶಾಖೆ, ಸಾಂಘಿಕ್‌ ಅಥವಾ ಬೈಠಕ್‌ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರುವಂತೆ ಸಿದ್ದರಾಮಯ್ಯ ಅವರಿಗೆ ಪ್ರಿಯಾಂಕ್‌ ಖರ್ಗೆ ಇದೇ ಅ.4ರಂದು ಪತ್ರ ಬರೆದು ಮನವಿ ಮಾಡಿದ್ದು ಈಗ ಬೆಳಕಿಗೆ ಬಂದಿದೆ.

‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು, ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆ ದೇವಸ್ಥಾನಗಳು, ಪುರಾತತ್ವ ಇಲಾಖೆ ಸ್ಥಳಗಳು ಸೇರಿ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್‌ ಸಂಘಟನೆಯು ಶಾಖೆ, ಸಾಂಘಿಕ್‌ ಅಥವಾ ಬೈಠಕ್‌ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳನ್ನು ನಿಷೇಧಿಸಬೇಕು’ ಎಂದು ಸಚಿವರು ಕೋರಿದ್ದಾರೆ.

ಸಿಎಂ ಸ್ಪಂದನೆ:

ವಿಶೇಷವೆಂದರೆ ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಅವರು ‘ಮುಖ್ಯ ಕಾರ್ಯದರ್ಶಿ ಅವರು ಪರಿಶೀಲನೆ ನಡೆಸಿ ಕೂಡಲೇ ಅಗತ್ಯ ಕ್ರಮ ಜರುಗಿಸುವುದು’ ಎಂದು ಪತ್ರದ ಮೇಲೆಯೇ ಬರೆದು ಸೂಚನೆ ನೀಡಿದ್ದಾರೆ. ಈ ಪತ್ರ ತಡವಾಗಿ ಬಹಿರಂಗವಾಗಿದ್ದು, ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತ ವಿರೋಧ ಪಕ್ಷದ ನಾಯಕರು, ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರು ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

 ಡಿಕೆಶಿ-ಮುನಿರತ್ನ ‘ಕರಿಟೋಪಿ’ ಗಲಾಟೆ 

 ಬೆಂಗಳೂರುಬೆಂಗಳೂರಿನ ಮತ್ತಿಕೆರೆ ಜೆ.ಪಿ.ಪಾರ್ಕ್‌ನಲ್ಲಿ ಭಾನುವಾರ ಸಾರ್ವಜನಿಕ ಕುಂದು-ಕೊರತೆ ಆಲಿಸುವ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡೆಸಿದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ಡಿಕೆಶಿ ಹಾಗೂ ಸ್ಥಳೀಯ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ನಡುವೆ ಭಾರಿ ಬಹಿರಂಗ ಜಟಾಪಟಿಯ ಹೈಡ್ರಾಮಾ ನಡೆದಿದೆ. ಗಣವೇಷಧಾರಿಯಾಗಿ ಬಂದಿದ್ದ ಮುನಿರತ್ನ ಅವರಿಗೆ ಡಿಕೆಶಿ ಅವರು, ‘ಏಯ್‌ ಕರಿ ಟೋಪಿ ಎಂಎಲ್‌ಎ ಈ ಕಡೆ ಬಾರಪ್ಪ’ ಎಂದಿದ್ದು ವಿವಾದಕ್ಕೀಡಾಗಿದೆ. ಇದಕ್ಕೆ ಕಿಡಿಕಾರಿದ ಮುನಿರತ್ನ, ‘ಇದು ನನಗಷ್ಟೇ ಅಲ್ಲ,. ಇಡೀ ಆರೆಸ್ಸೆಸ್‌ಗೆ ಮಾಡಿದ ಅವಮಾನ’ ಎಂದು ಆರೋಪಿಸಿ ಸ್ಥಳದಲ್ಲೇ ಧರಣಿ ನಡೆಸಿದ್ದಾರೆ.

ಡಿಕೆಶಿ ಹೇಳಿಕೆಯನ್ನು ಬಿಜೆಪಿ ನಾಯಕರಾದ ಬಿ.ವೈ. ವಿಜಯೇಂದ್ರ, ಆರ್‌. ಅಶೋಕ್ ಆದಿಯಾಗಿ ಅನೇಕರು ಖಂಡಿಸಿದ್ದಾರೆ.ಆಗಿದ್ದೇನು?:

ಜೆಪಿ ಪಾರ್ಕ್‌ಗೆ ಪರಿಶೀಲನೆಗಾಗಿ ಹಾಗೂ ಜನರ ಕುಂದುಕೊರತೆ ಆಲಿಕೆಗಾಗಿ ಡಿಕೆಶಿ ಭಾನುವಾರ ಬೆಳಗ್ಗೆ ಆಗಮಿಸಿದ್ದರು. ಆದರೆ ವೇದಿಕೆಗೆ ಬಾರದೆ ಸಾರ್ವಜನಿಕರು ಕೂರಲು ಮಾಡಲಾಗಿದ್ದ ಆಸನದ 6ನೇ ಸಾಲಿನಲ್ಲಿ, ಆಗಷ್ಟೇ ಆರೆಸ್ಸೆಸ್‌ ಪಥಸಂಚಲನದಲ್ಲಿ ಪಾಲ್ಗೊಂಡು ಮರಳಿದ್ದ ಗಣವೇಷಧಾರಿ ಮುನಿರತ್ನ ಕೂತಿದ್ದರು ಸ್ಥಳೀಯ ಶಾಸಕರಾದರೂ ತಮಗೆ ಆಹ್ವಾನ ನೀಡಿಲ್ಲ ಎಂದು ಮೊದಲೇ ಡಿಕೆಶಿ ಜತೆ ಎಣ್ಣೆ ಸೀಗಾಕಾಯಿ ಸಂಬಂಧ ಹೊಂದಿದ್ದ ಮುನಿರತ್ನ ಮುನಿದಿದ್ದರು.ಆಗ ಶಿವಕುಮಾರ್‌ ಅವರು ಮುನಿರತ್ನ ಜನರ ಮಧ್ಯೆ ಕೂತಿರುವುದನ್ನು ಗಮನಿಸಿ, ‘ಏಯ್‌ ಎಂಎಲ್‌ಎ ಅವ್ರೇ ಬನ್ರೀ... ಈ ಕಡೆ, ಏಯ್‌ ಕರಿ ಟೋಪಿ ಎಂಎಲ್‌ಎ ಈ ಕಡೆ ಬಾರಪ್ಪ...’ ಎಂದು ವೇದಿಕೆಗೆ ಆಹ್ವಾನಿಸಿದರು. ಜತೆಗೆ, ಹೊಸದಾಗಿ ಕರೆಯಬೇಕಾ ಎಂದು ಡಿಸಿಎಂ ಪ್ರಶ್ನಿಸಿದರು. ಈ ನಡುವೆ ವೇದಿಕೆಗೆ ಬಂದ ಮುನಿರತ್ನ, ಡಿಕೆಶಿ ಅವರ ಕೈಲಿದ್ದ ಮೈಕ್‌ ಕಸಿದು ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿಲ್ಲ. ನಾಗರಿಕನಾಗಿ ಜನರ ಮಧ್ಯೆ ಕೂರುವೆ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು.

ಆದರೆ ಡಿಕೆಶಿ ಕರಿಟೋಪಿ ಎಂದಿದ್ದು ವಿವಾದಕ್ಕೆ ಕಾರಣವಾಗಿದ್ದು, ಪಾರ್ಕ್‌ನಿಂದ ಹೊರ ಬಂದ ಶಾಸಕ ಮುನಿರತ್ನ ಮಹಾತ್ಮ ಗಾಂಧೀಜಿ ಫೋಟೋ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಕರಿ ಟೋಪಿ. ಬಿಳಿ ಅಂಗಿ, ಖಾಕಿ ಪ್ಯಾಂಟ್‌, ಕಪ್ಪು ಶೂ ಧರಿಸಿ ಆರ್‌ಎಸ್‌ಎಸ್‌ ಪಥ ಸಂಚಲನ ಮುಗಿಸಿಕೊಂಡು ಬಂದಿದ್ದ ತಮ್ಮನ್ನು ‘ಕರಿ ಟೋಪಿ ಎಂಎಲ್‌ಎ’ ಎನ್ನುವ ಮೂಲಕ ಆರ್‌ಎಸ್‌ಎಸ್‌ಗೆ ಡಿ.ಕೆ.ಶಿವಕುಮಾರ್‌ ಅವಮಾನ ಮಾಡಿದ್ದಾರೆ ಎಂದು ದೂರಿದರು.

ಅಧಿಕಾರ ಇದ್ದರೆ

ನಿಷೇಧ ಮಾಡ್ತಿದ್ದೆ

ಆರೆಸ್ಸೆಸ್‌ನವರು ಕೋಮು ವಿಷಬೀಜ ಬಿತ್ತುತ್ತಾರೆ. ನನಗೆ ಅಧಿಕಾರ ಇದ್ದಿದ್ದರೆ ಆರೆಸ್ಸೆಸ್‌ ಬ್ಯಾನ್‌ ಮಾಡುತ್ತಿದ್ದೆ. ನನ್ನ ಕೈಯಲ್ಲಿ ಆಗದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಘದ ಚಟುವಟಿಕೆಗಳ ನಿಷೇಧಕ್ಕೆ ಪತ್ರ ಬರೆದಿದ್ದೇನೆ.

- ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ

ಪ್ರಿಯಾಂಕ್‌ ಆರೋಪ, ಆಗ್ರಹ ಏನು?

- ಸರ್ಕಾರಿ ಶಾಲೆ, ಮೈದಾನ, ಇತರೆಡೆ ಐಕ್ಯತೆಗೆ ವಿರುದ್ಧವಾದ ಚಟುವಟಿಕೆಗಳನ್ನು ಆರೆಸ್ಸೆಸ್‌ ನಡೆಸುತ್ತಿದೆ

- ಸಂವಿಧಾನದ ಆಶಯಕ್ಕೆ ವಿರುದ್ಧವಾದ, ನಕಾರಾತ್ಮಕ ಚಿಂತನೆ ತುಂಬುವ ಕೆಲಸಗಳನ್ನು ಮಾಡುತ್ತಿದೆ

- ಪೊಲೀಸರ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸಲಾಗುತ್ತಿದೆ

- ಮುಗ್ಧ ಮಕ್ಕಳು, ಯುವಜನರ ಮನಸ್ಸಿನ ಮೇಲೆ ಈ ಮೂಲಕ ದುಷ್ಪರಿಣಾಮ ಬೀರುವ ಕೆಲಸ ಆಗುತ್ತಿದೆ

- ಯುವಜನರ, ಸಮಾಜದ ಸ್ವಾಸ್ಥ್ಯಕ್ಕಾಗಿ ಸರ್ಕಾರಿ ಸ್ಥಳದಲ್ಲಿ ಆರೆಸ್ಸೆಸ್‌ ಚಟುವಟಿಕೆಗಳನ್ನು ನಿಷೇಧಿಸಬೇಕು

ಎಲ್ಲೆಲ್ಲಿ ನಿಷೇಧಕ್ಕೆ ಆಗ್ರಹ?

ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು, ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆ ದೇವಸ್ಥಾನಗಳು, ಪುರಾತತ್ವ ಇಲಾಖೆ ಸ್ಥಳಗಳು ಸೇರಿ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್‌ ಸಂಘಟನೆಯು ಶಾಖೆ, ಸಾಂಘಿಕ್‌ ಅಥವಾ ಬೈಠಕ್‌ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳನ್ನು ನಿಷೇಧಿಸಬೇಕು.