ಆರ್‌ಎಸ್‌ಎಸ್ ಬ್ಯಾನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಬಿ.ವೈ.ರಾಘವೇಂದ್ರ

| Published : Oct 13 2025, 02:00 AM IST / Updated: Oct 13 2025, 02:01 AM IST

ಆರ್‌ಎಸ್‌ಎಸ್ ಬ್ಯಾನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ನಿಷೇಧಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರ ಮತ್ತು ಆ ಪತ್ರಕ್ಕೆ ಮುಖ್ಯಮಂತ್ರಿಗಳ ಒಕ್ಕಣಿ, ಕಾಂಗ್ರೆಸ್ಸಿನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ.

ಶಿವಮೊಗ್ಗ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ನಿಷೇಧಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರ ಮತ್ತು ಆ ಪತ್ರಕ್ಕೆ ಮುಖ್ಯಮಂತ್ರಿಗಳ ಒಕ್ಕಣಿ, ಕಾಂಗ್ರೆಸ್ಸಿನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಅದರ ಮಿತಿಮೀರಿದ ಅಲ್ಪಸಂಖ್ಯಾತ ತುಷ್ಟಿಕರಣ, ಓಲೈಕೆ ರಾಜಕಾರಣ ಮತ್ತು ಹಿಂದೂ ವಿರೋಧಿ ನಿಲುವುಗಳಿಗೆ ಈ ಪತ್ರ ಕನ್ನಡಿ ಹಿಡಿದಿದೆ. ಕಾಂಗ್ರೆಸ್ ಸರ್ಕಾರದ ಈ ನಾಚಿಕೆಗೇಡಿನ ನಡೆ, ಕೋಟ್ಯಂತರ ದೇಶಭಕ್ತ ನಾಗರಿಕರ ಭಾವನೆಗಳಿಗೆ ಮಾಡಿದ ಅವಮಾನ ಎಂದರೂ ತಪ್ಪಲ್ಲ ಎಂದು ದೂರಿದ್ದಾರೆ.

ಈ ಕಾಂಗ್ರೆಸ್ ಸರ್ಕಾರಕ್ಕೆ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್ಐ/ ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಕೇಸುಗಳನ್ನು ವಾಪಸ್ ಪಡೆದಾಗ ಸಂವಿಧಾನದ ಹೆಸರೂ ನೆನಪಾಗಲಿಲ್ಲವೇ?. ಮತ ಬ್ಯಾಂಕ್ ಓಲೈಕೆಗಾಗಿ ಒಂದು ಸಮುದಾಯಕ್ಕೆ ಕೋಟ್ಯಂತರ ಅನುದಾನ ಮತ್ತು ಧರ್ಮಾಧಾರಿತ ಮೀಸಲಾತಿ ನೀಡುವಾಗ ಕಾಂಗ್ರೆಸ್ ಜಾತ್ಯತೀತತೆಯ ಸೋಗು ಮಲಗಿರುತ್ತದೆಯೇ? ಕೋಟ್ಯಂತರ ಸ್ವಯಂ ಸೇವಕರಿಗೆ ದೇಶಭಕ್ತಿಯ, ರಾಷ್ಟ್ರಸೇವೆಯ ಸಂಸ್ಕಾರ ನೀಡಿ, ಸದೃಢ ರಾಷ್ಟ್ರ ನಿರ್ಮಾಣದ ಪವಿತ್ರ ಕಾರ್ಯದಲ್ಲಿ ತೊಡಗಿರುವ ಆರ್‌ಎಸ್‌ಎಸ್ ನ ಶಕ್ತಿಯನ್ನು ತಡೆಯಲು ಈ ರಾಜ್ಯ ಸರ್ಕಾರಕ್ಕೆ ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಮತ್ತೆ ಈ ಆರ್‌ಎಸ್‌ಎಸ್ ದ್ವೇಷ ಕಾಂಗ್ರೆಸ್ ಪಕ್ಷಕ್ಕೇನೂ ಹೊಸದಲ್ಲ. ಮಾಜಿ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು, ಇಂದಿರಾಗಾಂಧಿ ಅಂಥವರು ಒಡ್ಡಿದ ಸವಾಲುಗಳನ್ನೇ ಹಿಮ್ಮೆಟಿಸಿ ಶತಮಾನ ಪೂರೈಸಿದ ಸಂಘಕ್ಕೆ, ಪ್ರಿಯಾಂಕ್ ಖರ್ಗೆ ಅವರಂತಹ ಹೊಗಳು ಭಟ್ಟರ ಪೊಳ್ಳು ಬೆದರಿಕೆಗಳಿಂದ ಏನೂ ಆಗುವುದಿಲ್ಲ ಎಂದಿದ್ದಾರೆ.

ಪ್ರಿಯಂಕ್‌ ಖರ್ಗೆಯವರು ನೀವು ಈ ಪತ್ರ ಬರೆಯುವ ಮುನ್ನ ಒಮ್ಮೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಒಂದು ಮಾತು ಕೇಳಬೇಕಿತ್ತು. ಸದನದಲ್ಲೇ ಸಂಘದ ಪ್ರಾರ್ಥನೆ ಹಾಡಿದ ಅವರು ಸಂಘದ ಬಗ್ಗೆ ನಿಮಗೆ ಸ್ವಲ್ಪವಾದರೂ ಅಸಲಿ ಮಾಹಿತಿ ನೀಡಿರುತ್ತಿದ್ದರು. ಆದರೆ, ಸಂಘದ ಶಕ್ತಿ, ಜನ ಬೆಂಬಲ, ಕಾಂಗ್ರೆಸ್ಸಿನ ಧೃತಿಗೆಡಿಸಿದೆ ಎನ್ನುವುದನ್ನು ಈ ಪತ್ರವೇ ಬಯಲು ಮಾಡಿದೆ ಎಂದು ಹೇಳಿದ್ದಾರೆ.

ದೇಶಭಕ್ತಿ, ರಾಷ್ಟ್ರ ನಿರ್ಮಾಣ, ಭಾರತೀಯತೆ ಮತ್ತು ಈ ನೆಲದ ಸಂಸ್ಕೃತಿಯ ರಕ್ಷಣೆಯಲ್ಲಿ ತೊಡಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸುವಂತೆ ಈ ಕಾಂಗ್ರೆಸ್ ಸರ್ಕಾರದ ಪ್ರಯತ್ನ, ರಾಜ್ಯ ಸರ್ಕಾರದ ರಾಜಕೀಯ ದ್ವೇಷವನ್ನು ಎತ್ತಿ ತೋರಿಸುತ್ತದೆ. ಇದು ಕಾಂಗ್ರೆಸ್ಸಿನ ಅವಿವೇಕಿತನದ ಪರಮಾವಧಿ! ಕಾಂಗ್ರೆಸ್ ಈ ದೇಶವಿರೋಧಿ, ಜನವಿರೋಧಿ ನಿಲುವುಗಳಿಗೆ, ಜನರೇ ತಕ್ಕ ಪಾಠ ಕಲಿಸುತ್ತಾರೆ. ಈ ಕೂಡಲೇ ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿ, ಈ ಪತ್ರವನ್ನು ತಿರಸ್ಕರಿಸಿ, ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿದ್ದಾರೆ.