ಸಾರಾಂಶ
ಪ್ರೊ ಕಬಡ್ಡಿ ಆಯೋಜನೆ ಬಳಿಕ ಕಬಡ್ಡಿ ಆಟಗಾರರಲ್ಲಿ ಹೊಸ ಸಂಚಲನ ಮೂಡಿಸಿದೆ. ಮಣ್ಣಿನ ಅಂಕಣದಲ್ಲಿ ಆಡಲಾಗುತ್ತಿದ್ದ ಕಬಡ್ಡಿ ಮ್ಯಾಟ್ ಮೇಲೆ ಶೂಸ್‌ಗಳನ್ನು ಧರಿಸಿ ಆಡಲಾಗುತ್ತಿದೆ.
ಬ್ಯಾಡಗಿ: ಕಬಡ್ಡಿ ಕ್ರೀಡೆ ಪ್ರೋತ್ಸಾಹಿಸಲು ಸರ್ಕಾರ ಕ್ರೀಡಾಪಟುಗಳಿಗೆ ವಸತಿನಿಲಯ ಸೇರಿದಂತೆ ಆಟದ ಮೈದಾನ ಮತ್ತು ತರಬೇತುದಾರರನ್ನು ನೇಮಕ ಮಾಡಿಕೊಡುವ ಮೂಲಕ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪ್ರೋತ್ಸಾಹಿಸುತ್ತಿದೆ. ಕಬಡ್ಡಿ ತರಬೇತಿ ಪಡೆದಂತಹ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಕಂಡುಕೊಳ್ಳುವಂತೆ ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಕರೆ ನೀಡಿದರು.
ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಆಶ್ರಯದಲ್ಲಿ ಪಟ್ಟಣದ ಬಿಇಎಸ್‌ಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೇಸಿಗೆ ಕಬಡ್ಡಿ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.ಪ್ರೊ ಕಬಡ್ಡಿ ಆಯೋಜನೆ ಬಳಿಕ ಕಬಡ್ಡಿ ಆಟಗಾರರಲ್ಲಿ ಹೊಸ ಸಂಚಲನ ಮೂಡಿಸಿದೆ. ಮಣ್ಣಿನ ಅಂಕಣದಲ್ಲಿ ಆಡಲಾಗುತ್ತಿದ್ದ ಕಬಡ್ಡಿ ಮ್ಯಾಟ್ ಮೇಲೆ ಶೂಸ್‌ಗಳನ್ನು ಧರಿಸಿ ಆಡಲಾಗುತ್ತಿದೆ. ಹವ್ಯಾಸಿ ಆಗಿದ್ದ ಕ್ರೀಡೆ ವೃತ್ತಿಪರವಾಗಿ ಬದಲಾವಣೆ ಬಳಿಕ ಬಹುಮಾನಕ್ಕಾಗಿ ಆಟವಾಡುತ್ತಿದ್ದ ಕ್ರೀಡಾಪಟುಗಳು ಪ್ರೊ ಕಬಡ್ಡಿ ಆವೃತ್ತಿಗಳಲ್ಲಿ ಕೋಟಿಗಟ್ಟಲೆ ಹಣಕ್ಕೆ ಬಿಕರಿಯಾಗುತ್ತಿದ್ದಾರೆ ಎಂದರು.
ಆರೋಗ್ಯ ಶಿಕ್ಷಣ ಉದ್ಯೋಗ: ತಹಸೀಲ್ದಾರ್ ಫಿರೋಜ್‌ಶಾ ಸೋಮನಕಟ್ಟಿ ಮಾತನಾಡಿ, ಪ್ರೋತ್ಸಾಹದ ಕೊರತೆಯಿಂದ ಬಹಳಷ್ಟು ಹೆಸರಾಂತ ಕಬಡ್ಡಿ ಕ್ರೀಡಾಪಟುಗಳು ಹೆಸರಿಲ್ಲದಂತಾಗಿದ್ದಾರೆ. ಹಣಕಾಸಿನ ನಿರೀಕ್ಷೆ ಇಟ್ಟುಕೊಳ್ಳದೇ ಬಡ ಕುಟುಂಬದ ಹಿನ್ನೆಲೆಯುಳ್ಳ ಕ್ರೀಡಾಪಟುಗಳಿಗೆ ಆರೋಗ್ಯ, ಶಿಕ್ಷಣ ಉದ್ಯೋಗ ದೃಷ್ಟಿಕೋನವನ್ನಿಟ್ಟುಕೊಂಡು ಕಳೆದ 25 ವರ್ಷದಿಂದ ಕಬಡ್ಡಿ ತರಬೇತಿ ನೀಡುತ್ತಾ ಬಂದಿರುವ ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಜಿಲ್ಲೆಯ ನೂರಾರು ಕಬಡ್ಡಿ ಕ್ರೀಡಾಪಟುಗಳಿಗೆ ಉದ್ಯೋಗ ಕೊಡಿಸುವಲ್ಲಿ ಸಫಲವಾಗಿದ್ದು, ತಮ್ಮ ಮೂಲ ಉದ್ದೇಶವನ್ನು ಮುಂದುವರಿಸಲಿ ಎಂದು ಆಶಿಸಿದರು.ಕಬಡ್ಡಿ ಕ್ರೀಡಾಪಟುಗಳಿಗೆ ಅವಕಾಶ: ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೋಳ ಮಾತನಾಡಿ, ಕಬಡ್ಡಿಯಲ್ಲಿ ಅಸಾಧಾರಣ ಪ್ರತಿಭೆ ಮತ್ತು ಕೌಶಲ್ಯವನ್ನು ತೋರಿಸುವ ಕ್ರೀಡಾಪಟುಗಳಿದ್ದಾರೆ. ಸರ್ಕಾರಿ ಉದ್ಯೋಗ ಸೇರಿದಂತೆ ಇನ್ನಿತರ ಕಡೆ ಮೆರಿಟ್ ಆಧಾರದ ಮೇಲೆ ಕಬಡ್ಡಿ ಕ್ರೀಡಾಪಟುಗಳಿಗೆ ವಿಶೇಷ ಅವಕಾಶವಿದೆ. ಪಾಲಕರು ಇದನ್ನು ಗಮನದಲ್ಲಿಟ್ಟು ತಮ್ಮ ಮಕ್ಕಳನ್ನು ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಸಹಕರಿಸಬೇಕು ಎಂದರು.ಸಮವಸ್ತ್ರ ದಾನಿ, ಬೀಜ ವಿತರಕ ಸಂಸ್ಥೆ ಲಕ್ಷ್ಮೀ ಇನ್‌ಪುಟ್ಸ್ ಇಂಡಿಯಾ ಪ್ರೈ.ಲಿ.ನ ಹೇಮಂತ ಸರವಂದ ಮಾತನಾಡಿ, ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಸಾಧ್ಯವಾದಷ್ಟು ಮನವೊಲಿಸಲಾಗುತ್ತಿದೆ. ಕ್ರಿಕೆಟ್, ಫುಟ್‌ಬಾಲ್, ಟೆನ್ನಿಸ್ ಮಾದರಿಯಲ್ಲಿ ಕಬಡ್ಡಿಗೂ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಹಣ ವಿನಿಯೋಗಿಸುವ ಮೂಲಕ ಕಬಡ್ಡಿ ಕ್ರೀಡಾಪಟುಗಳಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.ಇದಕ್ಕೂ ಮುನ್ನ ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಮಲ್ಲನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ತಾಲೂಕಾಸ್ಪತ್ರೆ ವೈದ್ಯಾಧಿಕಾರಿ ಡಾ. ಪುಟ್ಟರಾಜ, ಬಿಇಎಸ್ ಪ್ರಾಚಾರ‍್ಯ ಡಾ. ಎಸ್.ಜಿ. ವೈದ್ಯ, ಉಪನ್ಯಾಸಕ ಸುರೇಶಕುಮಾರ ಪಾಂಗಿ, ಎನ್.ಎಸ್. ಪ್ರಶಾಂತ್, ಪ್ರಭು ದೊಡ್ಮನಿ, ಕೆಆರ್‌ಸಿಎಸ್ ಪ್ರಾಚಾರ‍್ಯ ಶಂಭುಲಿಂಗ ಹಿತ್ಲಮನಿ, ಲಕ್ಷ್ಮೀ ಇನ್‌ಪುಟ್ಸ್ ಇಂಡಿಯಾ ಪ್ರೈ.ಲಿ.ನ ಜಯಪ್ರಕಾಶ್, ಉದಯಕುಮಾರ, ಪವಾರ್, ಜಗದೀಶ, ತೀರ್ಪುಗಾರರಾದ ಎಂ.ಆರ್. ಕೋಡಿಹಳ್ಳಿ ಎ.ಟಿ. ಪೀಠದ, ಕೋಚ್ ಮಂಜುಳಾ ಭಜಂತ್ರಿ ಹಾಗೂ ಮಾಯಾ ಚೋಪಡೆ ಇದ್ದರು.