ಸಾರಾಂಶ
ಜಿಲ್ಲಾಡಳಿತ ಸ್ಥಳೀಯರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಲ್ಲಿ ಕೋರಿದರು
ಕನ್ನಡಪ್ರಭ ವಾರ್ತೆ ಮೈಸೂರು
ಪ್ರವಾಹ ಭೀತಿಯ ಎಚ್.ಡಿ. ಕೋಟೆ ತಾಲೂಕು ಗಡಿ ಭಾಗದ ಡಿ.ಬಿ. ಕುಪ್ಪೆ ಗ್ರಾಮಕ್ಕೆ ರೈತ ಕಲ್ಯಾಣ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ, ಅವರಿಗೆ ನೆರವಾದರು.ಸಂಘದ ರಾಜ್ಯಾಧ್ಯಕ್ಷ ಸಿ. ಚಂದನ್ ಗೌಡ ಅವರ ನೇತೃತ್ವದಲ್ಲಿ ಗ್ರಾಮಕ್ಕೆ ಧಾವಿಸಿದ ಪದಾಧಿಕಾರಿಗಳು ಗ್ರಾಮಸ್ಥರ ನೆರವಿಗೆಂದು ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಜನಕ್ಕೆ ಧೈರ್ಯ ತುಂಬಿದರು. ಜಿಲ್ಲಾಡಳಿತ ಸ್ಥಳೀಯರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಲ್ಲಿ ಕೋರಿದರು.
ಕೇರಳದ ವೈನಾಡ್ ಗಡಿ ಭಾಗದಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವ ಸಂದರ್ಭದಲ್ಲಿ ಗಡಿ ಭಾಗದ ಹೊಳೆಯ ಅಂಚಿನಲ್ಲಿ ವಾಸ ಮಾಡುತ್ತಿರುವ ಗ್ರಾಮಸ್ಥರ ನೆರವಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ, ಅಗತ್ಯವಾಗಿ ಪ್ರವಾಹಕ್ಕೆ ಸಿಲುಕಿರುವ ದನ- ಕರುಗಳು ಮತ್ತು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಗ್ರಾಮಸ್ಥರ ಸಹಾಯಕ್ಕೆಂದೇ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಹಾಗೂ ಅವರಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಚಂದನ್ ಗೌಡ ಸಂಬಂಧಪಟ್ಟವರಲ್ಲಿ ಕೋರಿದರು.ಕೂಡಲೇ ಟಾಸ್ಕ್ ಫೋರ್ಸ್ ರಚಿಸಿ, ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ನುರಿತ ಈಜುಗಾರರ ಸಹಾಯ ಪಡೆದು ನದಿಯ ದಡದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರ ಸುರಕ್ಷತೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ತಾಲೂಕಿನ ತಹಸೀಲ್ದಾರ್ ಹಾಗೂ ಆರೋಗ್ಯ ಅಧಿಕಾರಿಗಳಲ್ಲಿ ರೈತ ಕಲ್ಯಾಣ ಸಂಘ ಮನವಿ ಮಾಡುತ್ತದೆ ಎಂದರು.
ಈಗಾಗಲೇ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸಾಕಷ್ಟು ನೆರವಿನ ಕಾರ್ಯ ನಡೆಸಿದ್ದು, ಸ್ಥಳೀಯರು ಹಾಗೂ ನದಿಯಂಚಿನ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಉಮೇಶ್, ಜಿಲ್ಲಾ ಗೌರವಾಧ್ಯಕ್ಷ ಮಾದೇಗೌಡ, ಜಿಲ್ಲಾಧ್ಯಕ್ಷ ಅನಿಲ್, ರಾಜ್ಯ ಪತ್ರಿಕಾ ಕಾರ್ಯದರ್ಶಿ ಹರೀಶ್ ಪಿ.ಗೌಡ ಇದ್ದರು.