ಸಾರಾಂಶ
ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹1.11 ಕೋಟಿ ನಗದನ್ನು ರಾಮದುರ್ಗ ಪೊಲೀಸರು ವಶಕ್ಕೆ ಪಡೆದ ಘಟನೆ ತಾಲೂಕಿನ ಹಲಗತ್ತಿ ಗ್ರಾಮದ ಸಮೀಪದ ಚೆಕ್‌ಪೋಸ್ಟ್ ಬಳಿ ಶುಕ್ರವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ರಾಮದುರ್ಗ
ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹1.11 ಕೋಟಿ ನಗದನ್ನು ರಾಮದುರ್ಗ ಪೊಲೀಸರು ವಶಕ್ಕೆ ಪಡೆದ ಘಟನೆ ತಾಲೂಕಿನ ಹಲಗತ್ತಿ ಗ್ರಾಮದ ಸಮೀಪದ ಚೆಕ್‌ಪೋಸ್ಟ್ ಬಳಿ ಶುಕ್ರವಾರ ನಡೆದಿದೆ.ನಿಪ್ಪಾಣಿ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿರುವ ರಾಮದುರ್ಗ ತಾಲೂಕಿನ ಹೊಸೂರಿನ ವಿಠ್ಠಲ ಶಿವಪ್ಪ ಢವಳೇಶ್ವರ ಎಂಬುವರು ಕಾರಿನಲ್ಲಿ ರಾಮದುರ್ಗ ಮಾರ್ಗವಾಗಿ ಬಾಗಲಕೋಟೆ ಕಡೆಗೆ ಹಣ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಹಲಗತ್ತಿ ಗ್ರಾಮದ ಬಳಿ ಕಾರು ತಡೆದು ಪರಿಶೀಲನೆ ಮಾಡಿದ ಪೊಲೀಸರಿಗೆ ₹1,10,62,900 ನಗದು ಸಿಕ್ಕಿದೆ. ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.ರಾಮದುರ್ಗ ಡಿವೈಎಸ್ಪಿ ಎಂ. ಪಾಂಡುರಂಗಯ್ಯ ನೇತೃತ್ವದಲ್ಲಿ ಸಿಪಿಐ ಈರಣ್ಣ ಪಟ್ಟಣಶೆಟ್ಟಿ ಮತ್ತು ರಾಮದುರ್ಗ ಪೊಲೀಸರು ದಾಳಿ ಮಾಡಿದ್ದರು. ಬೆಳಗಾವಿಯ ಆದಾಯ ತೆರಿಗೆ ಇಲಾಖೆಯ ಸಹಾಯಕ ನಿರ್ದೇಶಕ ಅಮಿತ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.