ಯೋಜನೆಗಳ ಕಾರ್ಯಾರಂಭಕ್ಕೆ ಅಂತೂ ಮುಹೂರ್ತ ಫಿಕ್ಸ್

ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಹಳಿಯಾಳ

ಇಡೀ ತಾಲೂಕು ಬಹುದಿನಗಳಿಂದ ನಿರೀಕ್ಷಿಸಿದ ಕಾಳಿನದಿ ನೀರಾವರಿ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಹಳಿಯಾಳ ಮತ್ತು ದಾಂಡೇಲಿ ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಸುವ ಅಮೃತ 2-0 ಯೋಜನೆಗಳ ಕಾರ್ಯಾರಂಭಕ್ಕೆ ಅಂತೂ ಮುಹೂರ್ತ ಫಿಕ್ಸ್ ಆಗಿದೆ.

ಗುರುವಾರ ತಾಲೂಕಾಡಳಿತ ಸೌಧದಲ್ಲಿ ಶಾಸಕ ಆರ್.ವಿ. ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ನಡೆದ ಹಳಿಯಾಳ ವಿಧಾನಸಭಾ ಕ್ಷೇತ್ರ ಮಟ್ಟದ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಷ್ಠಾನ ಅಧಿಕಾರಿಗಳು ಹಾಗೂ ಕಾಳಿನದಿ ನೀರಾವರಿ ಕಾಮಗಾರಿಯ ಗುತ್ತಿಗೆದಾರರು ಯೋಜನೆಗಳು ಅಧಿಕೃತವಾಗಿ ಮುಕ್ತಾಯಗೊಳ್ಳುವ ಕಾಲಾವಧಿ ಘೋಷಿಸಿದರು. ಯೋಜನೆಗಳು ಕಾರ್ಯಾರಂಭಿಸುವ ಸಿಹಿಸುದ್ದಿ ಕೇಳುತ್ತಿದ್ದಂತೆಯೇ ಸಭೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಯಿತು.ಅತೀ ವಿಳಂಬವಾಯಿತಲ್ಲ:


ಬಹುಗ್ರಾಮ ನೀರಿನ ಯೋಜನೆ, ಕಾಳಿನದಿ ನೀರಾವರಿ ಯೋಜನೆಗಳನ್ನು ಬಹು ಕಷ್ಟದಿಂದ ಮಂಜೂರು ಮಾಡಿಸಿ ತಂದಿದ್ದೇನೆ. ಆದರೆ ಈ ಯೋಜನೆಯ ಅನುಷ್ಠಾನದಲ್ಲಿ ಬಾರಿ ವಿಳಂಬವಾಗಿದೆ. ಮತದಾರರಿಗೆ ಉತ್ತರಿಸಿ ನನಗೆ ಸಾಕಾಗಿ ಹೋಗಿದೆ. ಆದಷ್ಟೂ ಬೇಗ ಯೋಜನೆ ಮುಕ್ತಾಯಗೊಂಡು ಅದರ ಸದುಪಯೋಗ ಜನರಿಗೆ ಸಕಾಲದಲ್ಲಿ ದೊರೆಯಬೇಕು. ಇಲ್ಲದಿದ್ದರೇ ಪ್ರಯೋಜನವೇನು ಎಂದು ಪ್ರಶ್ನಿಸಿದರು. ಯೋಜನೆ ವಿಳಂಬವಾಗಿರುವುದಕ್ಕೆ ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಕಾಳಿನದಿ ನೀರಾವರಿ ಕಾಮಗಾರಿಯ ಗುತ್ತಿಗೆದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.ಬಹುಗ್ರಾಮ ಅಕ್ಟೋಬರ್‌ಗೆ ಅಂತ್ಯ:

ತಾಲೂಕಿನ ಗ್ರಾಮಾಂತರ ಭಾಗಗಳಿಗೆ ಕಾಳಿನದಿಯಿಂದ ಕುಡಿಯುವ ನೀರನ್ನು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಹಿತಿ ಸಲ್ಲಿಸಿದ ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಸಂಜೀವ ಬಿರಾದಾರ, ಈಗಾಗಲೇ ಈ ಕಾಮಗಾರಿ ಶೇ.90 ಕಾಮಗಾರಿಯು ಮುಕ್ತಾಯಗೊಂಡಿದ್ದು, ಹಂತ ಹಂತವಾಗಿ ಪರಿಶೀಲನೆ ಮಾಡುವ ಮೂಲಕ ಗ್ರಾಮೀಣ ಭಾಗಗಳಿಗೆ ನೀರು ಪೂರೈಕೆ ಆರಂಭಿಸಲಾಗಿದ್ದು, ಈ ವರ್ಷದ ಅ. 31ರೊಳಗೆ ಕಾಮಗಾರಿಯು ಸಂಪೂರ್ಣ ಮುಕ್ತಾಯಗೊಳ್ಳಲಿದೆ ಎಂದು ಸಭೆಗೆ ತಿಳಿಸಿದರು.ಹಳಿಯಾಳ-ದಾಂಡೇಲಿಗೆ ನವೆಂಬರನಲ್ಲಿ ನೀರು:

ಹಳಿಯಾಳ ಮತ್ತು ದಾಂಡೇಲಿ ನಗರದಲ್ಲಿ ಕೈಗೊಂಡಿರುವ ಅಮೃತ 2-0 ನಿರಂತರ ಕುಡಿಯುವ ನೀರಿನ ಯೋಜನೆಯ ಪ್ರಗತಿ ಮಂಡಿಸಿದ ಎಇಇ ರಷೀದ್ ರಿತ್ತಿ, ಮೇನಲ್ಲಿ ಯೋಜನೆ ಅಂತ್ಯಗೊಳಿಸುವ ಗುರಿ ನೀಡಲಾಗಿತ್ತು, ಆದರೆ ಆಡಳಿತಾತ್ಮಕ ಕಾರಣಗಳಿಂದ ಯೋಜನೆ ಕಾರ್ಯಾರಂಭಿಸಲು ವಿಳಂಬವಾಗಿದ್ದು, ಈ ವರ್ಷದ ನವೆಂಬರ್‌ ತಿಂಗಳಲ್ಲಿ ದಾಂಡೇಲಿ ಮತ್ತು ಹಳಿಯಾಳದ ಕುಡಿಯುವ ನೀರು ಪೂರೈಕೆಯ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ನವೆಂಬರ್ ತಿಂಗಳಿನಿಂದ ಅಧಿಕೃತವಾಗಿ ಯೋಜನೆಯು ಕಾರ್ಯಾರಂಭಿಸಲಿದೆ ಎಂದರು.ಜು.20ಕ್ಕೆ ಕಾಳಿನದಿ ಯೋಜನೆ ಮುಕ್ತಾಯ:

ಕಾಳಿನದಿ ನೀರಾವರಿ ಯೋಜನೆಯ ಕಾಮಗಾರಿ ಪರಿಶೀಲನೆಯಲ್ಲಿ ಪಾಲ್ಗೊಂಡ ಗುತ್ತಿಗೆದಾರರು ಜು. 20ರೊಳಗೆ ನೀರಾವರಿ ಕಾಮಗಾರಿಯು ಮುಕ್ತಾಯಗೊಳ್ಳಲಿದೆ ಎಂದು ವಿಶ್ವಾಸದಿಂದ ಸಭೆಯಲ್ಲಿ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎನ್.ಎನ್.ಎಲ್ ನಿಗಮದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತ ಲಕ್ಷ್ಮಣ ನಾಯಕ್ ಗುತ್ತಿಗೆದಾರರ ನೀಡಿದ ಭರವಸೆಯಂತೆ ಯೋಜನೆ ಮುಕ್ತಾಗೊಳಿಸಲು ಸರ್ವ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ತಹಸೀಲ್ದಾರ ಉಸ್ತುವಾರಿ:

ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ತಹಸೀಲ್ದಾರರು ಮತ್ತು ತಾಪಂ ಇಒಗಳು ತಾಲೂಕಿನ ಕೈಗೊಳ್ಳಲಾಗುವ ಯೋಜನೆಗಳ ಪ್ರಗತಿ ಪರಿಶೀಲನೆ ಹಾಗೂ ಪಾಲೋ-ಅಪ್ ಸಭೆಗಳನ್ನು ವಾರಕೊಮ್ಮೆ ನಡೆಸಬೇಕು, ಅದರ ಮಾಹಿತಿಯನ್ನು ತಮ್ಮ ಕಾರ್ಯಾಲಯಕ್ಕೂ ಸಲ್ಲಿಸಬೇಕೆಂದು ಶಾಸಕರು ತಿಳಿಸಿದರು.

ಹಳಿಯಾಳ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ಇಒ ವಿಲಾಸರಾಜ್ ಪ್ರಸನ್ನ, ದಾಂಡೇಲಿ ತಹಸೀಲ್ದಾರ ಶೈಲೇಶ ಪರಮಾನಂದ, ಇಒ ಟಿ.ಸಿ. ಹಾದಿಮನಿ, ಜೋಯಿಡಾ ತಹಸೀಲ್ದಾರ ಮಂಜುನಾಥ ಮುನವಳ್ಳಿ, ಇಒ ಭಾರತಿ ಎನ್., ಹಳಿಯಾಳ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.