ಬಾಕಿ ವೇತನ ಇನ್ನಿತರ ಬೇಡಿಕೆಗಳ ಶೀಘ್ರ ಈಡೇರಿಸಿ

| Published : Aug 07 2024, 01:11 AM IST

ಸಾರಾಂಶ

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ನಾಲ್ಕು ತಿಂಗಳ ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಯುವಜನ ಮತ್ತು ಕ್ರೀಡಾ ಇಲಾಖೆ ಕಾರ್ಮಿಕರ ಫೆಡರೇಷನ್ ಎಐಯುಟಿಯುಸಿ ಜಿಲ್ಲಾ ಘಟಕ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

- ಪ್ರತಿಭಟನೆಯಲ್ಲಿ ಯುವ ಸಬೀಲಕರಣ-ಕ್ರೀಡಾ ಇಲಾಖೆ ಹೊರಗುತ್ತಿಗೆ ನೌಕರರ ಒತ್ತಾಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ನಾಲ್ಕು ತಿಂಗಳ ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಯುವಜನ ಮತ್ತು ಕ್ರೀಡಾ ಇಲಾಖೆ ಕಾರ್ಮಿಕರ ಫೆಡರೇಷನ್ ಎಐಯುಟಿಯುಸಿ ಜಿಲ್ಲಾ ಘಟಕ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ನಗರದ ಜಿಲ್ಲಾ ಕ್ರೀಡಾಂಗಣ ಆವರಣದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಮುಖಂಡರು, ಕ್ರೀಡಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಜಿಲ್ಲಾ ಸಂಚಾಲಕ ಮಂಜುನಾಥ ಕೈದಾಳೆ ಮಾತನಾಡಿ, ಜಿಲ್ಲೆಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ 4 ತಿಂಗಳಿನಿಂದ ವೇತನ ನೀಡಿಲ್ಲ. ನಾಲ್ಕು ತಿಂಗಳ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವ ಕೆಲಸ ಆಗಬೇಕು ಎಂದರು.

ತೀವ್ರ ಅಸಮಾಧಾನ:

ಹೊರ ಕಾರ್ಮಿಕರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಿಗೆ ವೇತನ ಪಾವತಿಸಬೇಕು. ಕಾರ್ಮಿಕರಿಗೆ ವಾರದ ರಜೆ, ತಿಂಗಳ ರಜೆ, ರಾಷ್ಟ್ರೀಯ ಹಬ್ಬಗಳ ರಜೆ ನೀಡಬೇಕು. ಇದಲ್ಲದೇ ಈವರೆಗೆ ರಜಾ ದಿನಗಳಲ್ಲಿ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಎರಡರಷ್ಟು ತುಟ್ಟಿ ಭತ್ಯೆ ರೂಪದಲ್ಲಿ ವೇತನ ನೀಡಬೇಕು. ವೇತನ ಚೀಟಿ, ಇಪಿಎಫ್ ಇತರ ಸೌಲಭ್ಯಕ್ಕಾಗಿ ಅನೇಕ ಸಲ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

5 ತಿಂಗಳಿಂದ ವೇತನ ಬಂದಿಲ್ಲ:

ರಾಜ್ಯ ಸರ್ಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಸಲ್ಪಡುವ ಕ್ರೀಡಾಂಗಣ, ಕ್ರೀಡಾ ವಸತಿ ನಿಲಯಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹೊರ ಗುತ್ತಿಗೆ ಬಿಕೆಆರ್ ಸ್ವಾಮಿ ಏಜೆನ್ಸಿ ಮೂಲಕ ನಡೆಯುತ್ತಿದ್ದು, ಸುಮಾರು 25ಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕಾರ್ಮಿಕರಿಗೆ 5 ತಿಂಗಳಿಂದ ವೇತನ ಬಂದಿಲ್ಲ. ಭದ್ರತಾ ಸಿಬ್ಬಂದಿಗೆ ಕನಿಷ್ಠ 8 ಗಂಟೆ ಮಾತ್ರ ಕೆಲಸ ನೀಡಬೇಕು ಎಂದ ಅವರು, ಬೇಡಿಕೆಗಳನ್ನು ಶೀಘ್ರ ಈಡೇರಿಸಲು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಅಣಬೇರು ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಮಂಜುನಾಥ ಕುಕ್ಕುವಾಡ, ಹೊರ ಕಾರ್ಮಿಕರಾದ ಗದಿಗೆಪ್ಪ, ಮುರುಗೇಶಿ, ನರಸಿಂಹಮೂರ್ತಿ, ಚನ್ನಬಸವರಾಜ, ಜಯಮ್ಮ, ಅಂಜಿನಿ, ಸುಬ್ಬಣ್ಣ, ಬಲರಾಮ ಅರಸು ಹೊನ್ನಾಳಿ, ನರಸಿಂಹಪ್ಪ, ಚನ್ನಪ್ಪ, ನವೀನ, ಹರೀಶ, ಮಹಾಂತೇಶ ಹರಿಹರ ಇತರರು ಇದ್ದರು.

- - - ಬಾಕ್ಸ್‌ * ಬೇಡಿಕೆಗಳೇನು?- ಭದ್ರತಾ ಸಿಬ್ಬಂದಿಗೆ ಕೆಲಸದ ಅವದಿ 8 ಗಂಟೆ ನಿಗದಿಪಡಿಸಬೇಕು

- ಹೆಚ್ಚುವರಿ ಅವಧಿಯ 2 ಪಟ್ಟು ವೇತನವನ್ನೂ ಕೊಡಿಸಬೇಕು

- ಸಮವಸ್ತ್ರ ಮತ್ತು ಗುರುತಿನ ಚೀಟಿ ನೀಡಬೇಕು

- ಪ್ರತಿ ತಿಂಗಳು ವೇತನ ಚೀಟಿ ನೀಡಬೇಕು

- ನೇಮಕಾತಿ ದಿನದಿಂದ ಈವರೆಗೂ ವೇತನ, ಇಪಿಎಫ್, ಇಎಸ್ಐ ಹಣ ಪಾವತಿಸಿರುವ ಬಗ್ಗೆ ದಾಖಲೆಗಳ ನೀಡಬೇಕು

- - --5ಕೆಡಿವಿಜಿ4:

ಹೊರಗುತ್ತಿಗೆ ಕಾರ್ಮಿಕರ 4 ತಿಂಗಳ ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ ಎದುರು ಎಐಯುಟಿಯುಸಿ ವತಿಯಿಂದ ಪ್ರತಿಭಟಿಸಲಾಯಿತು.