ಹಿರಿಯೂರು ತಾಲೂಕಿನ ಭೀಮನಬಂಡೆ ಗ್ರಾಮದ ಯಾಜ್ಞವಲ್ಕ್ಯ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಯಾಜ್ಞವಲ್ಕ್ಯ ವಿದ್ಯಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ನಾಡಿನ ನೆಲ, ಜಲ ಸಂಪತ್ತು ಭಾಷೆ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಯಾಜ್ಞವಲ್ಕ್ಯ ಶಾಲೆಯ ಸಂಸ್ಥಾಪಕ ಅಧ್ಯಕ್ಷರ ಟಿ. ಸುರೇಶ್ ಹೇಳಿದರು.

ತಾಲೂಕಿನ ಭೀಮನಬಂಡೆ ಗ್ರಾಮದ ಯಾಜ್ಞವಲ್ಕ್ಯ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಯಾಜ್ಞವಲ್ಕ್ಯ ವಿದ್ಯಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದ್ದು ತಾಯಿಯ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಲು 1,915 ಮೇ 5ರಂದು

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಮಿರ್ಜಾ ಇಸ್ಮಾಯಿಲ್, ಸರ್ ಎಂ.ವಿಶ್ವೇಶ್ವರಯ್ಯನವರು ಜೊತೆಗೂಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದರು. ಅಂದಿನಿಂದ ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಪರಿಷತ್ತು ಹಲವು ಘಟಕಗಳನ್ನು ಆರಂಭಿಸುವ ಮೂಲಕ ಜಿಲ್ಲಾ ಮಟ್ಟದ, ತಾಲೂಕು, ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆ ಯೋಜನೆ ಮಾಡುವ ಮೂಲಕ ಸ್ಥಳೀಯ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡುತ್ತ ಬಂದಿದೆ. ಜೊತೆಗೆ ಯುವ ಬರಹಗಾರರಿಗೆ ಕವಿಗೋಷ್ಠಿ ವಿಚಾರ ಸಂಕಿರಣ ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು.

ಇದೇ ವೇಳೆ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ, ಸಾಹಿತಿ ಎಚ್.ಶಫಿವುಲ್ಲಾ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ ರಾಮಚಂದ್ರಪ್ಪ, ಸಾಹಿತ್ಯ ಪರಿಷತ್ ಜಿಲ್ಲಾ ಸಲಹಾ ಸಮಿತಿ ಸದಸ್ಯ ಹರ್ತಿ ಕೋಟೆ ಮಹಾಸ್ವಾಮಿ, ಯಾಜ್ಞವಲ್ಕ್ಯ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಜಿ ಶ್ರೀನಿವಾಸ್ ಮೂರ್ತಿ,ಯು. ಹರ್ಷ, ಮಹಾಂತೇಶ್, ನರಸಿಂಹಮೂರ್ತಿ,ಸುಗುಣ, ವರದೇಗೌಡ,ಸುರೇಶ್, ನವೀನ್ ಪ್ರಭು,ಹಂಸ ಶಂಕರ್ ಮುಂತಾದವರು ಉಪಸ್ಥಿತರಿದ್ದರು.