ಗ್ರಾಮಸ್ಥರು ಕಳೆದ 17 ದಿನಗಳಿಂದಲೂ ಗ್ರಾಪಂ ಸೇರ್ಪಡೆ ವಿರೋಧಿಸಿ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸಹ ಇಬ್ಬರು ಶಾಸಕದ್ವಯರು ಹೋರಾಟಗಾರರ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಗೆಜ್ಜಲಗೆರೆ ಸೇರಿದಂತೆ ನಾಲ್ಕು ಗ್ರಾಪಂಗಳನ್ನು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ವಿರೋಧಿಸಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 17ನೇ ದಿನವೂ ಮುಂದುವರೆದಿದೆ.ನಗರಸಭೆ ವ್ಯಾಪ್ತಿಯಿಂದ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ಕೈಬಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಭರವಸೆ ನಂತರವೂ ಹೋರಾಟಗಾರರು ಬುಧವಾರ ವಿಶೇಷವಾಗಿ ತಮಟೆ ಚಳವಳಿ ನಡೆಸಿದರು. ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಆದೇಶ ರದ್ದು ಮಾಡಬೇಕು ಹಾಗೂ ಆದೇಶಕ್ಕೆ ನ್ಯಾಯಾಲಯದ ತಡೆಯಾಜ್ಞೆ ದೊರಕುವವರೆಗೆ ಧರಣಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.
ಗ್ರಾಪಂಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ವಿಚಾರದಲ್ಲಿ ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರ ನಿಲುವು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರವಾಗಿದೆ ಎಂದು ಕಿಡಿಕಾರಿದರು. ಗ್ರಾಮಸ್ಥರು ಕಳೆದ 17 ದಿನಗಳಿಂದಲೂ ಗ್ರಾಪಂ ಸೇರ್ಪಡೆ ವಿರೋಧಿಸಿ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸಹ ಇಬ್ಬರು ಶಾಸಕದ್ವಯರು ಹೋರಾಟಗಾರರ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಚುನಾವಣೆಯಲ್ಲಿ ಬೆಂಬಲಿಸಿದ ಮತದಾರರು ಮತ್ತು ಜನಪ್ರತಿನಿಧಿಗಳಿಗೆ ಕನಿಷ್ಠ ಧರಣಿ ಸ್ಥಳಕ್ಕೆ ಧಾವಿಸಿ ಮಾತುಕತೆ ನಡೆಸುವ ಸೌಜನ್ಯರಿಗೆ ಇಲ್ಲವಾಗಿದೆ. ಇಂಥವರನ್ನು ಆಯ್ಕೆ ಮಾಡಿದ ಜನರು ಪಶ್ಚಾತಾಪ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮದ್ದೂರು ನಗರಸಭೆ ವ್ಯಾಪ್ತಿಯಿಂದ ಗ್ರಾಪಂಗಳನ್ನು ಕೈಬಿಡುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಚಳವಳಿಯನ್ನು ಅತಿರೇಕಕ್ಕೆ ಕೊಂಡಯ್ಯಬಾರದು ಎಂಬ ಉದ್ದೇಶದಿಂದ ಶಾಂತ ರೀತಿಯಿಂದ ಧರಣಿ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಧರಣಿಯಲ್ಲಿ ಮುಖಂಡರಾದ ಜಿ.ಟಿ.ಚಂದ್ರಶೇಖರ್, ಮೋಹನ್, ಜಿ.ಸಿ.ಮಹೇಂದ್ರ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ರೈತ ಮುಖಂಡ ಜೈಶಂಕರ್, ಗ್ರಾಪಂ ಅಧ್ಯಕ್ಷೆ ರಾಧಾ ಸೇರಿದಂತೆ ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.