ಸಾರಾಂಶ
ಆರೋಪಿ, ವಿಡಿಯೋ ವೈರಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ । ನೂರಾರು ಹೆಣ್ಣುಮಕ್ಕಳ ಘನತೆಗೆ ಧಕ್ಕೆ
ಕನ್ನಡಪ್ರಭ ವಾರ್ತೆ ಹಾಸನಪ್ರಜ್ವಲ್ ರೇವಣ್ಣ ಮತ್ತು ವಿಡಿಯೋ ವೈರಲ್ ಮಾಡಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ರೀತಿ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್ ಮಾತನಾಡಿ, ‘ಹಾಸನದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಕುರಿತು ಸೂಕ್ತ ತನಿಖೆಯನ್ನು ನಡೆಸಿ ಕಾನೂನು ರೀತಿಯ ಶಿಕ್ಷೆ ನೀಡಬೇಕು. ಸಾರ್ವಜನಿಕ ಜೀವನದಲ್ಲಿ ಅಧಿಕಾರದ ಕೇಂದ್ರ ಸ್ಥಾನದಲ್ಲಿರುವವರು ತಮ್ಮ ಜವಾಬ್ದಾರಿಯನ್ನು ಅರಿತು ಘನತೆಯಿಂದ ನಡೆದುಕೊಳ್ಳಬೇಕು. ಒಂದು ವೇಳೆ ಸಭ್ಯತೆಯನ್ನು ಮೀರಿದರೆ ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ’ ಎಂದು ಎಚ್ಚರಿಸಿದರು.ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಾವಿರಾರು ವಿಡಿಯೋಗಳನ್ನು ಒಳಗೊಂಡ ಪೆನ್‌ಡ್ರೈವ್ ಸೋರಿಕೆ ಆಗಿದೆ. ಹಣ ಅಧಿಕಾರದ ಅಮಲಿನಲ್ಲಿ ನೂರಾರು ಹೆಣ್ಣುಮಕ್ಕಳ ಘನತೆಗೆ ಧಕ್ಕೆ ತಂದಿರುವ ಪ್ರಜ್ವಲ್ ರೇವಣ್ಣ ಅವರನ್ನು ಶೀಘ್ರವಾಗಿ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಎಲ್ಲಾ ಸಂತ್ರಸ್ತ ಮಹಿಳೆಯರ ಪರವಾಗಿ ನಾಡಿನ ವಿದ್ಯಾರ್ಥಿ ಸಮುದಾಯ ದೃಢವಾಗಿ ನಿಲ್ಲಲಿದ್ದು, ಸರ್ಕಾರದ ವತಿಯಿಂದ ಸಂತ್ರಸ್ತ ಮಹಿಳೆಯರಿಗೆ ಆಪ್ತ ಸವಾಲೋಚನೆಯನ್ನು ನಡೆಸಬೇಕೆಂದು ವಿದ್ಯಾರ್ಥಿ ಪರಿಷತ್ ಕೋರುತ್ತದೆ. ಈಗಾಗಲೇ ರಾಜ್ಯ ಸರ್ಕಾರವು ನೇಮಕ ಮಾಡಿರುವ ಎಸ್ಐಟಿ ತನಿಖಾ ತಂಡವು ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ತನಿಖೆಯನ್ನು ಕೈಗೊಂಡು ಸತ್ಯಾಸತ್ಯತೆಯನ್ನು ಹೊರತಂದು ಸಂತ್ರಸ್ತ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಬೇಕು. ನೀಚ ಕೃತ್ಯ ಎಸಗಿದ ಆರೋಪಿಗಳಿಗೆ ಗರಿಷ್ಠ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ವಿದ್ಯಾರ್ಥಿ ಪರಿಷತ್ ವಿನಂತಿಸುತ್ತದೆ ಎಂದು ಹೇಳಿದರು.ಈ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡಿ ನೂರಾರು ಹೆಣ್ಣುಮಕ್ಕಳ ಮಾನಹಾನಿಯನ್ನು ಮಾಡಿದ ವ್ಯಕ್ತಿಗಳ ಮೇಲೂ ಕೂಡ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು. ಇಂತಹ ಪ್ರಕರಣಗಳಲ್ಲಿ ನ್ಯಾಯಯುತ ತನಿಖೆ ನಡೆದು ಆರೋಪಿಗಳಿಗೆ ಶಿಕ್ಷೆ ಆಗದೆ ಹೋದಲ್ಲಿ ಸಮಾಜದಲ್ಲಿ ಉಳ್ಳವರಿಗೊಂದು ನ್ಯಾಯ, ಉಳಿದವರಿಗೊಂದು ನ್ಯಾಯ ಎಂಬಂತಹ ಸಂದೇಶ ರವಾನೆ ಆಗಬಹುದು. ಸಾರ್ವಜನಿಕರಿಗೆ ತನಿಖಾ ಸಂಸ್ಥೆ ಜಾರಿಯಲ್ಲಿರುವ ಕಾನೂನುಗಳ ಮೇಲೆ ಅಪನಂಬಿಕೆ ಮೂಡಬಹುದು. ಹಾಗಾಗಿ ಪ್ರಕರಣದ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ಅರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಎಬಿವಿಪಿ ಮುಖಂಡರಾದ ಶ್ರೀನಿವಾಸ್ ಸಾವರ್ಕರ್, ಚಿರಂತ್, ಲೇಪಾಕ್ಷ, ವೇಣು, ಸುಶ್ಮಿತಾ ಇತರರು ಭಾಗವಹಿಸಿದ್ದರು.ಸಂಸದ ಪ್ರಜ್ವಲ್ ರೇವಣ್ನನನ್ನು ಬಂಧಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಗುರುವಾರ ಹಾಸನದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))