ರಣ ಬಿಸಿಲಿನ ಹೊಡೆತದಿಂದ ಕುಕ್ಕುಟೋದ್ಯಮ ಕುಸಿತ

| Published : May 03 2024, 01:06 AM IST

ಸಾರಾಂಶ

ತಾಲೂಕಿನಲ್ಲಿ ಮೊಟ್ಟೆ ಉತ್ಪಾದನೆ ಶೇ. 20 ಕುಸಿತ ಕಂಡು ಸಾಕಾಣಿಕೆದಾರರು ಹೈರಾಣು, ಮೊಟ್ಟೆ ಬೆಲೆ ದಿಢೀರ್‌ ಕಡಿಮೆಯಾಗಿರುವುದು, ಕೋಳಿ ಆಹಾರ ಬೆಲೆ ಹೆಚ್ಚಳದಿಂದ ತೀವ್ರ ನಷ್ಟ

ಬಿಜಿಕೆರೆ ಬಸವರಾಜ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ದಿನದಿಂದ ದಿನಕ್ಕೆಏರಿಕೆಯಾಗುತ್ತಿರುವ ಬಿರು ಬಿಸಿಲ ತಾಪ ಕುಕ್ಕುಟೋದ್ಯಮಕ್ಕೂ ತಾಕಿದೆ. ಬಿಸಿ ಗಾಳಿ ಹೊಡೆತಕ್ಕೆ ಸಿಲುಕಿ ಕೋಳಿಗಳ ಮೊಟ್ಟೆ ಉತ್ಪಾದನೆ ಕುಂಠಿತಗೊಂಡಿರುವ ನಡುವೆ ಮೊಟ್ಟೆ ದರ ಕುಸಿತ ಕೋಳಿ ಸಾಕಣೆದಾರರನ್ನು ಕಂಗೆಡಿಸಿದೆ.

ಶೆಡ್‌ಗಳಲ್ಲಿ ಧಗೆ ಹೆಚ್ಚಾಗಿ ಕೋಳಿಗಳು ಆಹಾರ ಸೇವನೆ ಕಡಿಮೆ ಮಾಡಿದ್ದು, ಇದರಿಂದಾಗಿ ಮೊಟ್ಟೆ ಉತ್ಪಾದನೆಯೂ ಕುಂಠಿತಗೊಂಡಿದೆ. ಬಿಸಿ ಗಾಳಿ ಹೊಡೆತ ಸಹಿಸಲಾಗದ ಕೋಳಿ ಉಂಟಾಗುತ್ತಿದ್ದು, ಪ್ರತಿ ಫಾರಂನಲ್ಲಿ ನಿತ್ಯ ನೂರಾರು ಕೋಳಿಗಳು ಇದ್ದಕ್ಕಿದ್ದಂತೆ ಸಾವಿಗೀಡಾಗುತ್ತಿರುವುದು ಮಾಲೀಕರನ್ನು ಆತಂಕಕ್ಕೆ ದೂಡಿದೆ.

ತಾಲೂಕಿನಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ಉಷ್ಣಾಂಶದಿಂದ ಕೋಳಿಗಳು ಆಹಾರ ಸೇವನೆ ಶಕ್ತಿ ಕಡಿಮೆಯಾಗಿದೆ. 110 ರಿಂದ 115 ಗ್ರಾಂ ಆಹಾರ ಸೇವನೆ ಮಾಡಬೇಕಾದ ಕೋಳಿಗಳು ಪ್ರಸ್ತುತ 80 ರಿಂದ 90 ಗ್ರಾಂ ನಷ್ಟು ಆಹಾರವನ್ನಷ್ಟೇ ತಿನ್ನುತ್ತಿರುವ ಪರಿಣಾಮ ಮೊಟ್ಟೆ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದೆ.

ತಾಲೂಕಿನ ಬಿಜಿಕೆರೆ, ಕೊಂಡ್ಲಹಳ್ಳಿ, ಮೊಗಲಹಳ್ಳಿ, ಕೋನಸಾಗರ, ಹಾನಗಲ್, ಬೈರಾಪುರ, ಮಾರಮ್ಮನಹಳ್ಖಿ ಸೇರಿ ವಿವಿಧ ಕಡೆ 20ಕ್ಕೂ ಹೆಚ್ಚಿನ ಕೋಳಿ ಫಾರಂಗಳಲ್ಲಿ 20 ಲಕ್ಷ ಕೋಳಿ ಸಾಕಣೆ ಮಾಡಲಾಗಿದೆ. ಪ್ರತಿದಿನ 19 ಲಕ್ಷಕ್ಕೂ ಹೆಚ್ಚಿನ ಮೊಟ್ಟೆ ಇಳುವರಿ ಬರಬಹುದಾದ ಈ ಸಮಯದಲ್ಲಿ ಕೇವಲ 17 ಲಕ್ಷ ಮೊಟ್ಟೆ ಉತ್ಪಾದನೆಯಾಗುತ್ತಿದ್ದು ಶೇಕಡ 20 ರಷ್ಟು ಮೊಟ್ಟೆ ಉತ್ಪಾದನೆ ಕಡಿಮೆಯಾಗಿದೆ ಎನ್ನುವುದು ಫಾರಂ ಮಾಲೀಕರ ಅಳಲು.

ಕಳೆದ ಎರಡು ತಿಂಗಳ ಹಿಂದೆ ಇದ್ದ 6 ರು. ಹೋಲ್ ಸೇಲ್ ಮೊಟ್ಟೆ ದರ ಒಮ್ಮೆಲೆ 3.90 ರಿಂದ 4 ರು.ಗೆ ಕುಸಿದಿದೆ. ಕೋಳಿ ಮರಿಗಳ ಖರೀದಿ, ಔಷಧ, ಆಹಾರ ಧಾನ್ಯಗಳ ಖರೀದಿ, ವಿದ್ಯುತ್ ಶುಲ್ಕ ಸೇರಿ ಪ್ರತಿ ಮೊಟ್ಟೆಗೆ 3.80ರು. ಖರ್ಚು ಬರುತ್ತಿದೆ. ಕೇವಲ 4 ರು.ಗೆ ಮೊಟ್ಟೆ ಮಾರಾಟದಿಂದ ಲಾಭ ಇಲ್ಲದೆ ಕನಿಷ್ಠ ಕೂಲಿಕಾರರಿಗೂ ಹಣ ನೀಡಲು ಕಷ್ಟ ಸಾಧ್ಯವಾಗುತ್ತಿದೆ. ಈಗಿನ ದರಕ್ಕೆ ಮಾರಾಟ ಮಾಡಲೂ ಆಗದೆ ಶಖರಣೆ ಮಾಡಿಕೊಳ್ಳಲು ಆಗದೆ ಕೇವಲ 20 ಪೈಸೆ ಲಾಭಕ್ಕೆ ಮೊಟ್ಟೆ ಮಾರಾಟ ಮಾಡಿ ಕೋಳಿ ಬದುಕಿಸಿಕೊಳ್ಳುವಂತಹ ಸ್ಥಿತಿ ಎದುರಾಗಿದೆ.

ಕೋಳಿ ಶೆಡ್‌ಗಳಲ್ಲಿ ನೀರು ಸಂಪರ್ಕದ ಪೈಪುಗಳು ಬಿಸಿಲಿಗೆ ಕಾದು ನೀರು ಬಿಸಿಯಾಗುತ್ತಿವೆ. ಬಿಸಿ ನೀರು ಸೇವನೆಯಿಂದ ಕೋಳಿ ಸಾವಿಗೀಡಾಗುವ ಆತಂಕ ಎದುರಾಗಿದೆ. ಇದರಿಂದ ನೀರಿನ ಪೈಪುಗಳಲ್ಲಿನ ಬಿಸಿ ನೀರನ್ನು ದಿನವೊಂದಕ್ಕೆ ಐದಾರು ಬಾರಿ ಹೊರ ಬಿಟ್ಟು ಬದಲಿ ನೀರನ್ನು ತುಂಬಿಸಿ ಕೋಳಿಗಳಿಗೆ ನೀರುಣಿಸಲಾಗುತ್ತಿದೆ. ಜತೆಗೆ ಶೆಡ್ ಮೇಲ್ಚಾವಣಿಗಳ ಮೇಲೆ ನೀರು ಹರಿಸಿ ತಂಪು ಮಾಡುತ್ತಾ ಕೋಳಿ ಕಾಪಾಡುವುದು ಅನಿವಾರ್ವಾಗಿದೆ ಎನ್ನುತ್ತಾರೆ ಫಾರಂ ಮಾಲೀಕರು.

ಬೇಸಿಗೆ ಮೊಟ್ಟೆ ವ್ಯಾಪಾರಕ್ಕೆ ಸುಸಮಯ ಅಲ್ಲವಾದರೂ ಈ ಬಾರಿಯ ಬಿರು ಬೇಸಿಗೆ ರಣ ಬಿಸಿಲು ಮೊಟ್ಟೆ ವ್ಯಾಪಾರ ನೆಲ ಕಚ್ಚುವಂತೆ ಮಾಡಿದೆ. ಜತೆಗೆ ಜನತೆ ಬಿಸಿಲಿಗೆ ಅಂಜಿ ಮೊಟ್ಟೆ ಸೇವನೆ ಕಡಿಮೆಗೊಳಿಸಿರುವ ಪರಿಣಾಮ ಬೇಡಿಕೆಯೂ ಕಡಿಮೆಯಾಗಿದ್ದು ಕುಕ್ಕುಟೋದ್ಯಮದಲ್ಲಿರುವವರನ್ನು ಹೈರಾಣಾಗಿಸಿದೆ.

ಈ ಬಾರಿ ರಾಜ್ಯದಲ್ಲಿ ಬಂದೊರೆಗಿದ ಬರ ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರಿ ಕೃಷಿ ಜನರ ಬದುಕನ್ನು ಕಸಿದುಕೊಂಡಿದೆ. ಕೃಷಿ ಧಾನ್ಯಗಳ ಉತ್ಪಾದನೆ ಇಲ್ಲದೆ ಕೋಳಿ ಆಹಾರ ಧಾನ್ಯಗಳ ಕೊರತೆಯೂ ಕಾಡುತ್ತಿದೆ. ಸಿಕ್ಕರೂ ಬೆಲೆಯೂ ಗಗನಕ್ಕೇರಿರುವುದು ಕೋಳಿ ಸಾಕಣೆದಾರರ ಸಮಸ್ಯೆ ಹೆಚ್ಚಿಸಿದೆ. ಇದೇ ಬಿಸಿಲು ಹೀಗೆಯೇ ಕೆಲ ಮುಂದುವರಿದಿದ್ದಲ್ಲಿ ಕುಕ್ಕುಟೋದ್ಯಮ ಇನ್ನಷ್ಟು ನಷ್ಟಕ್ಕೆ ಸಿಲುಕುವುದು ನಿಶ್ಚಿತ ಎನ್ನುತ್ತಾರೆ ಕೋಳಿ ಸಾಕಾಿಕೆದಾರರು.ಉಷ್ಣಾಂಶ ಹೆಚ್ಚಳದಿಂದಾಗಿ ಕೋಳಿ ಮೊಟ್ಟೆ ಉತ್ಪಾದನೆ ಶೇ.40ರಷ್ಟು ಕುಸಿತ ಕಂಡಿದೆ. ಬಿಸಿ ಗಾಳಿಯಿಂದ ಕೋಳಿಗಳು ಸಾವಿಗೀಡಾಗುತ್ತಿರುವ ನಡುವೆ ಮೊಟ್ಟೆ ದರ ತೀವ್ರವಾಗಿ ಕುಸಿತ ಕಂಡಿರುವುದು ರೈತರನ್ನು ಇನ್ನಷ್ಟು ಸಮಸ್ಯೆಗೆ ದೂಡಿದೆ. ಸರ್ಕಾರ ಕೋಳಿ ಸಾಕಣೆದಾರರ ನೆರವಿಗೆ ಧಾವಿಸುವುದು ಅಗತ್ಯವಾಗಿದೆ.

- ವಿಜಯ ಕುಮಾರ್. ಅಧ್ಯಕ್ಷ, ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲೂಕು ಕೋಳಿ ಸಾಕಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ