ದುರಾಡಳಿತ: ಅರಸೀಕಟ್ಟೆ ದೇವಾಲಯ ಅಭಿವೃದ್ಧಿ ಸಮಿತಿಯಿಂದ ಪ್ರತಿಭಟನೆ

| Published : Feb 10 2024, 01:45 AM IST

ದುರಾಡಳಿತ: ಅರಸೀಕಟ್ಟೆ ದೇವಾಲಯ ಅಭಿವೃದ್ಧಿ ಸಮಿತಿಯಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಕಲಗೂಡು ತಾಲೂಕಿನ ಅರಸೀಕಟ್ಟೆ ದೇವಾಲಯದ ಅಭಿವೃದ್ಧಿ ಆಗದಂತೆ ತಾಲೂಕು ಆಡಳಿತ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿ ದೇವಾಲಯ ಸಮಿತಿ ಸದಸ್ಯರು ಶುಕ್ರವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಧರಣಿ । ದೇಗುಲ ಅಭಿವೃದ್ಧಿಗೆ ತಾಲೂಕು ಆಡಳಿತ ಅಡ್ಡಿ ಆರೋಪ ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಅರಸೀಕಟ್ಟೆ ದೇವಾಲಯದ ಅಭಿವೃದ್ಧಿ ಆಗದಂತೆ ತಾಲೂಕು ಆಡಳಿತ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿ ದೇವಾಲಯ ಸಮಿತಿ ಸದಸ್ಯರು ಶುಕ್ರವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಾಲೂಕು ಆಡಳಿತದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಅರಸೀಕಟ್ಟೆ ಅಮ್ಮ ದೇವಾಲಯಕ್ಕೆ ರಾಜ್ಯದಾದ್ಯಂತ ಭಕ್ತರಿದ್ದಾರೆ. 5 ವರ್ಷಗಳ ಹಿಂದೆ ತೀರಾ ಅವ್ಯವಸ್ಥೆಗೊಳಗಾಗಿದ್ದ ದೇವಾಲಯವನ್ನು ಸಮಿತಿ ರಚಿಸಿಕೊಂಡು ಅಭಿವೃದ್ಧಿ ಪಡಿಸಿರುವುದಲ್ಲದೆ ಭಕ್ತರಿಂದ ಬರುವ ಹಣದ ಲೆಕ್ಕವನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಣೆ ನಡೆಸಲಾಗುತ್ತಿದೆ. ದೇವಾಲಯದ ನಿರ್ವಹಣೆ ಕಂದಾಯ ಇಲಾಖೆ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹಿಂದೆ ಇದ್ದ ತಹಸೀಲ್ದಾರ್ ಅವರ ನಿರ್ಣಯ ಆಧರಿಸಿ ಸಹಕಾರ ಸಂಘಗಳ ನಿಬಂಧನೆಗೊಳಪಟ್ಟು ಸಮಿತಿ ರಚಿಸಿಕೊಂಡು ಇಲ್ಲಿ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದನ್ನು ಧಾರ್ಮಿಕ , ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸಿದೆ. ಪ್ರತಿ ವರ್ಷ ಜಿಎಸ್‌ಟಿ ತೆರಿಗೆ ಪಾವತಿಸುತ್ತಿದೆ. ಬಂದ ಹಣದಲ್ಲಿ ದೇವಾಲಯದ ಅಭಿವೃದ್ಧಿಯ ಜತೆಗೆ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತ ಬಂದಿದೆ. ಆದರೆ ತಾಲೂಕು ಆಡಳಿತ ಮತ್ತು ತಹಸೀಲ್ದಾರ್ ದೇವಾಲಯ ಸರ್ಕಾರಿ ಜಾಗದಲ್ಲಿದೆ ಎಂಬ ಕಾರಣ ನೀಡಿ ಕಿರುಕುಳ ನೀಡುತ್ತಿದೆ. ನೋಟಿಸ್‌ ನೀಡಿ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದರು.

ತಾಲೂಕು ಆಡಳಿತದ ವಿರುದ್ದ ಸಮಿತಿ ಹೈಕೋರ್ಟ್ ಮೊರೆ ಹೋಗಿದ್ದು ದೇವಾಲಯದ ಮೇಲೆ ಹಸ್ತಕ್ಷೇಪ ನಡೆಸಲು ಅಧಿಕಾರವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಸೂಚನೆ ನೀಡಿದ್ದರೂ ಆದೇಶವನ್ನು ಉಲ್ಲಂಘಿಸಿ ಕಿರುಕುಳ ನೀಡುತ್ತಿದೆ. ಸರ್ಕಾರವೇ ದೇವಾಲಯವನ್ನು ವಶಕ್ಕೆ ಪಡೆಯಲು ಮುಂದಾದಲ್ಲಿ ಒಪ್ಪಿಸಲು ತಯಾರಿದ್ದೇವೆ. ತಾಲೂಕು ಆಡಳಿತದ ಪರಿಣಾಮ ಒಳ್ಳಯ ಕೆಲಸ ಮಾಡಲು ಪ್ರತಿಭಟನೆ ನಡೆಸಬೇಕಾದ ದುಸ್ಥಿತಿ ಉಂಟಾಗಿರುವುದು ಶೋಚನೀಯ ಸಂಗತಿ ಎಂದು ಹೇಳಿದರು.

ಯಾವುದೇ ಅನುಮತಿ ಪಡೆಯದೆ ವಾಣಿಜ್ಯ ವಹಿವಾಟು ನಡೆಸುತ್ತಿರುವ ಕೆಲವು ಖಾಸಗಿ ವ್ಯಕ್ತಿಗಳ ಪರವಾಗಿ ತಾಲೂಕು ಆಡಳಿತ ನಿಂತಿದೆ. ಕೇವಲ ಸಾಂಕೇತಿಕವಾಗಿ ಶುಕ್ರವಾರ ಪ್ರತಿಭಟನೆ ನಡೆಸಿದ್ದು ಮುಂದಿನ ದಿನಗಳಲ್ಲಿ ಬೀದಿಗಿಳಿದು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳುವ ಮೂಲಕ ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಅಭಿವೃದ್ಧಿ ಸಹಿಸದೆ ಕಿರುಕುಳ ಮುಂದುವರಿಸಿದರೆ ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿ ಗಮನಕ್ಕೆ ತಂದು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದರು.

ಮುಖಂಡರಾದ ಕೃಷ್ಣೇಗೌಡ, ಮಾದೇಶ್, ಜನಾರ್ದನಗುಪ್ತ, ಶಂಕರಯ್ಯ, ವೀರೇಶ್, ಗಣೇಶ್ ವೇಲಾಪುರಿ, ಪ್ರದೀಪ್ ಕುಮಾರ್, ಅಬ್ದುಲ್ ಬಾಸಿದ್, ಚಂದ್ರಪ್ಪ, ಲೋಕೇಶ್ ಇದ್ದರು.

ದೂರು:

ಅರಸೀಕಟ್ಟೆ ಅಮ್ಮ ದೇವಾಲಯ ಬಳಿ ಕೆರೆ ಮುಚ್ಚಿ ಲೂಟಿಯಲ್ಲಿ ತೊಡಗಿದ್ದಾರೆ. ಕೆರೆ ಮುಚ್ಚಿದವರ ವಿರುದ್ದ ತಹಸೀಲ್ದಾರ್ ಕ್ರಮ ಕೈಗೊಂಡಿಲ್ಲ. ಇವರ ವಿರುದ್ದ ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಶಾಸಕರು ತಿಳಿಸಿದರು.ಅರಸೀಕಟ್ಟೆ ದೇಗುಲ ಅಭಿವೃದ್ಧಿಗೆ ತಾಲೂಕು ಆಡಳಿತವೇ ಕಂಟಕವಾಗಿದೆ ಎಂದು ಆರೋಪಿಸಿ ದೇಗುಲ ಅಭಿವೃದ್ಧಿ ಸಮಿತಿ ಶುಕ್ರವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.