ಧ್ವಜ ಪ್ರಕರಣ: ಕೆರಗೋಡಿನಲ್ಲಿ ಬಂದ್ ಯಶಸ್ವಿ

| Published : Feb 10 2024, 01:45 AM IST

ಸಾರಾಂಶ

ಬಂದ್ ಕರೆಯ ನಡುವೆಯೂ ನಗರ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು, ದಿನಸಿ ಅಂಗಡಿಗಳು ಸೇರಿ ಇನ್ನಿತರೆ ವಾಣಿಜ್ಯ ಚಟುವಟಿಕೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಜಿಲ್ಲಾ ವಾಣಿಜ್ಯ ಮಂಡಳಿ ಬಂದ್ ಬೆಂಬಲಿಸುವುದಿಲ್ಲ ಎಂದು ಹೇಳಿದ್ದ ಕಾರಣ ವರ್ತಕರು, ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡದೆ ವ್ಯಾಪಾರ-ವಹಿವಾಟಿನಲ್ಲಿ ನಿರತರಾಗಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿರುವುದನ್ನು ವಿರೋಧಿಸಿ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್ ಸಂಪೂರ್ಣ ವಿಫಲವಾಯಿತು. ಬಂದ್ ಅಂಗವಾಗಿ ನಡೆದ ಬೈಕ್ ರ್‍ಯಾಲಿಯಷ್ಟೇ ಯಶಸ್ವಿಯಾಯಿತು.

ಕೆರಗೋಡು ಗ್ರಾಮದ ರಂಗಮಂದಿರದ ಮುಂಭಾಗವಿರುವ ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಿರುವ ೧೦೮ ಅಡಿ ಧ್ವಜಸ್ಥಂಭದಲ್ಲಿ ಹಾರಿಸಲಾಗಿದ್ದ ಶ್ರೀ ಹನುಮ ಧ್ವಜವನ್ನು ತೆರವುಗೊಳಿಸಿದ್ದ ಜಿಲ್ಲಾಡಳಿತ ರಾಷ್ಟ್ರಧ್ವಜವನ್ನು ಹಾರಿಸಿದೆ. ಮತ್ತೆ ಹನುಮಧ್ವಜ ಹಾರಿಸುವಂತೆ ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರು ಒತ್ತಾಯ ಮಾಡಿದ್ದರು. ಆದರೆ, ಜಿಲ್ಲಾಡಳಿತ ಅದಕ್ಕೆ ಮಣೆ ಹಾಕದೇ ರಾಷ್ಟ್ರಧ್ವಜ ಹಾರಿಸುವ ನಿಲುವಿಗೆ ಬದ್ಧವಾಗಿತ್ತು. ಈ ಹಿನ್ನೆಲೆ ಮಂಡ್ಯ ಹಾಗೂ ಕೆರಗೋಡು ಬಂದ್‌ಗೆ ಕರೆ ನೀಡಲಾಗಿತ್ತು.

ಶ್ರೀರಾಮ ಭಜನಾ ಮಂಡಳಿ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕರೆ ನೀಡಿದ್ದ ಮಂಡ್ಯ ಬಂದ್‌ಗೆ ಜನರಿಂದ ನಿರೀಕ್ಷಿತ ಸಹಕಾರ ಸಿಗಲೇ ಇಲ್ಲ. ವಿವಾದದ ಕೇಂದ್ರವಾಗಿರುವ ಕೆರಗೋಡು ಗ್ರಾಮದಲ್ಲಿ ಬಂದ್ ಯಶಸ್ವಿಯಾಗಿದೆ.

ಬಂದ್ ಕರೆಯ ನಡುವೆಯೂ ನಗರ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು, ದಿನಸಿ ಅಂಗಡಿಗಳು ಸೇರಿ ಇನ್ನಿತರೆ ವಾಣಿಜ್ಯ ಚಟುವಟಿಕೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಜಿಲ್ಲಾ ವಾಣಿಜ್ಯ ಮಂಡಳಿ ಬಂದ್ ಬೆಂಬಲಿಸುವುದಿಲ್ಲ ಎಂದು ಹೇಳಿದ್ದ ಕಾರಣ ವರ್ತಕರು, ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡದೆ ವ್ಯಾಪಾರ-ವಹಿವಾಟಿನಲ್ಲಿ ನಿರತರಾಗಿದ್ದರು.

ಲಾರಿ, ಆಟೋ, ಕಾರು, ಬಸ್ಸುಗಳ ಸಂಚಾರ ಎಂದಿನಂತಿತ್ತು. ಯಾವುದೇ ಚಟುವಟಿಕೆಗಳಿಗೂ ಅಡಚಣೆ ಉಂಟಾಗಲಿಲ್ಲ. ನಗರದಲ್ಲಿ ಎಲ್ಲವೂ ಸಹಜ ಸ್ಥಿತಿಯಲ್ಲೇ ಮುಂದುವರೆದಿತ್ತು. ವರ್ತಕರಿಗೆ ಗುಲಾಬಿ ಹೂ ನೀಡಿ ಹಿಂದೂ ಸಂಘಟನೆಯವರು ಬಂದ್‌ಗೆ ಬೆಂಬಲ ಕೋರಿದ್ದರೂ ಅದಕ್ಕೆ ಸಹಕಾರವೇ ಸಿಗಲಿಲ್ಲ.

ಬಂದ್‌ನಿಂದಾಗಿ ವ್ಯಾಪಾರ-ವಹಿವಾಟು, ವಿದ್ಯಾರ್ಥಿಗಳಿಗೆ ತೊಂದರೆಯಾಗಲಿರುವ ಹಿನ್ನೆಲೆ ಸಮಾನ ಮನಸ್ಕರು ಫೆ.೭ರಂದು ಕರೆ ನೀಡಿದ್ದ ಮಂಡ್ಯ ಬಂದ್‌ನ್ನು ಜಿಲ್ಲಾಡಳಿತ ಮಾತುಕತೆ ಮೂಲಕ ಮನವೊಲಿಸಿ ವಾಪಸ್ ಪಡೆದಿದ್ದರು. ಆದರೆ ಹಿಂದೂ ಪರ ಸಂಘಟನೆಯವರು ಬಂದ್ ಮಾಡುವುದಾಗಿ ತಿಳಿಸಿದ್ದರು. ಇದರ ನಡುವೆ ಬಿಜೆಪಿ ಬಂದ್‌ ಅನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿತ್ತು.

ಶಾಸಕರ ನಿವಾಸಕ್ಕೆ ಭದ್ರತೆ

ಶಾಸಕ ಪಿ. ರವಿಕುಮಾರ್ ಗಣಿಗ ಅವರ ಬಂದೀಗೌಡ ಬಡಾವಣೆಯ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ನಿವಾಸದ ಸುತ್ತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.ನಗರದಾದ್ಯಂತ ಬಿಗಿ ಬಂದೋಬಸ್ತ್

ಹಿಂದೂ ಸಂಘಟನೆಗಳು ಮಂಡ್ಯ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರ್‍ಯಾಲಿ ಬರುವ ಮಾರ್ಗದಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರದ ನಂದ ಸರ್ಕಲ್, ಮಹಾವೀರ ವೃತ್ತ, ಜೆ.ಸಿ. ವೃತ್ತ ಸೇರಿ ಆಯಕಟ್ಟಿನ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸಶಸ್ತ್ರ ಪೊಲೀಸ್ ಹಾಗೂ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು.

ಬೈಕ್ ರ್‍ಯಾಲಿ ಮತ್ತು ಪಾದಯಾತ್ರೆ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿತ್ತು.

ಧ್ವಜಕ್ಕಾಗಿ ಬೈಕ್ ರ್‍ಯಾಲಿ ಯಶಸ್ವಿ

ಶ್ರೀರಾಮ ಭಜನಾ ಮಂಡಳಿ, ಭಜರಂಗದಳ, ವಿಶ್ವ ಹಿಂದೂ ಪರಿಷತ್‌ನ ನೂರಾರು ಮಂದಿ ಕಾರ್ಯಕರ್ತರು ಕೆರಗೋಡು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಂಡ್ಯ ನಗರದವರೆಗೆ ಬೈಕ್ ರ್‍ಯಾಲಿ ನಡೆಸಿದರು. ಬೈಕ್ ರ್‍ಯಾಲಿ ಮರಿಲಿಂಗನದೊಡ್ಡಿ, ಅಂಕಣ್ಣನದೊಡ್ಡಿ, ಹುಲಿವಾನ, ಹೊನಗಾನಹಳ್ಳಿ, ಕೊಮ್ಮೇರಹಳ್ಳಿ, ಸಾತನೂರು, ಚಿಕ್ಕಮಂಡ್ಯ, ಶ್ರೀ ಕಾಳಿಕಾಂಬ ದೇವಾಲಯದ ಮಾರ್ಗವಾಗಿ ನಂದಾ ವೃತ್ತದ ಮೂಲಕ ನಗರದ ರೈಲು ನಿಲ್ದಾಣದ ಬಳಿ ಇರುವ ಶ್ರೀ ವೀರಾಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಿತು.

ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ಪೂರೈಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು. ಈ ವೇಳೆ ‘ಜೈ ಶ್ರೀರಾಮ್’, ‘ಜೈ ಹನುಮಾನ್’ ಘೋಷಣೆಗಳು ಮೊಳಗಿದವು. ಹಿಂದೂ ಕಾರ್ಯಕರ್ತರು ಹನುಮಾನ್ ಹಾಡಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು. ರೈಲು ನಿಲ್ದಾಣ ಸಮೀಪವಿರುವ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವ ಪ್ರಯತ್ನಕ್ಕೆ ಯಾರೊಬ್ಬರೂ ಮುಂದಾಗಲಿಲ್ಲ.