ಯಲಬುರ್ಗಾ: ಕೂಡಲಸಂಗಮದ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಮಾನಸಿಕವಾಗಿ ಬ್ಲಾಕ್ ಮೇಲ್ ಮಾಡುವುದನ್ನು ಖಂಡಿಸಿ ತಾಲೂಕು ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
ಸಮಾಜದ ಸಿ.ಎಚ್. ಪಾಟೀಲ್, ಸುರೇಶಗೌಡ ಶಿವನಗೌಡ್ರ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಸ್ವಾಮೀಜಿಗಳು ಹೋರಾಟ ನಡೆಸುತ್ತಿದ್ದಾರೆ.ಈ ಹೋರಾಟಕ್ಕೆ ಇಡೀ ಸಮಾಜ ಬೆಂಬಲ ಸೂಚಿಸಿದೆ.ಆದರೆ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಶಾಸಕ ವಿಜಯಾನಂದ ಕಾಶಪ್ಪನವರ್ ಸ್ವಾಮೀಜಿ ತೇಜೋವಧೆ ಮಾಡುತ್ತಿದ್ದಾರೆ.
ಶ್ರೀಗಳ ಏಳಿಗೆ ಸಹಿಸದ ವಿಕೃತ ಮನಸ್ಸಿನವರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸಮಾಜ ಬಾಂಧವರಿಗೆ ತೀವ್ರ ನೋವುಂಟು ಮಾಡಿದೆ. ರಾಜ್ಯದ ಪಂಚಮಸಾಲಿ ಸಮಾಜದ ಜನಗಳ ಧಾರ್ಮಿಕ ಭಾವನೆ ಮತ್ತು ಕೂಡಲಸಂಗಮ ಪೀಠಕ್ಕೆ ಅವಮಾನ ಎಸಗಿದ ವ್ಯಕ್ತಿ ಮತ್ತು ಆತನ ಹಿಂದೆ ಇರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಮುಗಿಸಿದರೆ ಪಂಚಮಸಾಲಿ ಸಮಾಜದ ೨ಎ ಮೀಸಲಾತಿ ಬೇಡಿಕೆ ಹೋರಾಟ ಅಂತ್ಯವಾಗಲಿದೆ ಎಂಬ ಭಾವನೆ ಕಾಶಪ್ಪನವರ ಸಹಚರರ ಭಾವನೆಯಾಗಿದೆ. ೨ಎ ಮೀಸಲಾತಿಗಾಗಿ ಸ್ವಾಮೀಜಿ ನಿರಂತರ ಹೋರಾಟ ನಡೆಸಿದ್ದಾರೆ. ಇತ್ತೀಚಿನ ಎಲ್ಲ ಬೆಳವಣಿಗೆ ಲಿಂಗಾಯತ ಪಂಚಮಸಾಲಿ ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸ್ವಾಮೀಜಿಗೆ ತೊಂದರೆ ಕೊಟ್ಟು ಹೋರಾಟ ಹತ್ತಿಕ್ಕುವ ಷಡ್ಯಂತ್ರ ನಡೆದಿದೆ. ಅದು ಅಸಾಧ್ಯ. ಸೂಕ್ತ ಸಮಯದಲ್ಲಿ ಸಮಾಜ ತಕ್ಕ ಉತ್ತರ ನೀಡಲಿದೆ ಎಂದರು.ಮುಖಂಡ ಕೆ.ಜಿ. ಪಲ್ಲೇದ ಮಾತನಾಡಿ, ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಯಾವ ಪಕ್ಷ, ಮಠಕ್ಕೂ ಸೀಮಿತವಾಗಿಲ್ಲ. ಅವರು ಸಮಾಜದ ಅಭ್ಯುದಯಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಶಾಸಕ ವಿಜಯಾನಂದ ಕಾಶಪ್ಪನವರ ಅಥವಾ ಬಸವ ಮೃತ್ಯುಂಜಯ ಶ್ರೀಗಳ ನಡುವೆ ಮುನಿಸು ಏಕಿದೆಯೊ ಗೊತ್ತಾಗುತ್ತಿಲ್ಲ. ಇಬ್ಬರು ಪಂಚಮಸಾಲಿ ಸಮಾಜದ ಹಿತ ಕಾಯಬೇಕು. ಈಗಿನ ಘಟನೆಗಳಿಂದ ಶ್ರೀಗಳಿಗೆ ಹಿಂಸೆಯಾಗಿದೆ. ಸ್ವಾಮೀಜಿಗಳ ಮೇಲೆ ಆರೋಪ ಮಾಡಿದ ಮಹಿಳೆಯೇ ನಾಪತ್ತೆಯಾಗಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ವೀರನಗೌಡ ಬನ್ನಪ್ಪಗೌಡರ, ಅಮರೇಶ ಹುಬ್ಬಳ್ಳಿ, ಆರ್.ಜಿ. ನಿಂಗೋಜಿ, ಸಿದ್ದಪ್ಪ ಹಕ್ಕಿಗುಣಿ, ಮಂಜುನಾಥ ಅಧಿಕಾರಿ, ಜಿ.ಎಸ್.ಪಾಟೀಲ್, ಎ.ಎಂ.ಶಂಕ್ರಗೌಡ, ಸಿದ್ರಾಮೇಶ ಬೇಲೇರಿ, ಮಲ್ಲಿಕಾರ್ಜುನ ನರೇಗಲ್, ಅಕ್ಕಮಹಾದೇವಿ ಪಾಟೀಲ್, ಮಹಾಂತೇಶ ಭಾಸ್ಕರ್, ಶರಣಪ್ಪ ಗೋಣಿ ಸೇರಿದಂತೆ ಇನ್ನಿತರರು ಇದ್ದರು.