ಹರಪನಹಳ್ಳಿ: ವಚನಗಳ ಮೂಲಕ ಜಾಗೃತಿ ಮೂಡಿಸಿದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಹೇಳಿದರು.
ನಗರದ ಅಂಬ್ಲಿ ದೊಡ್ಡಬರಮಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭಾ, ಕಾಲೇಜು ಐಕ್ಯೂಎಸಿ ಸಹಭಾಗಿತ್ವದೊಂದಿಗೆ ನಡೆದ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾಡಿನಲ್ಲಿ ಬುದ್ದ, ಬಸವ, ಅಂಬೇಡ್ಕರ್ ಅವರ ಸಿದ್ಧಾಂತಗಳು ಜನಪರವಾಗಿವೆ. ಆದರೆ ಅಂತಹ ತತ್ವ, ಸಿದ್ಧಾಂತಗಳನ್ನು ಕೆಲವರು ವಿರೋಧಿಸುತ್ತ ಬಂದಿದ್ದಾರೆ. ಪ್ರಜ್ಞಾವಂತ ಮನುಷ್ಯನಲ್ಲಿ ಯಾವಾಗ ಪ್ರಶ್ನಿಸುವ ಗುಣ ಬಂದು ಅದಕ್ಕೆ ಉತ್ತರ ಕಂಡುಕೊಂಡಾಗ ಮಾತ್ರ ಅರ್ಥ ಬರುತ್ತದೆ ಎಂದರು.
ಭಾರತವನ್ನು ಪ್ರಜಾಪ್ರಭುತ್ವದ ರಾಷ್ಟ್ರವನ್ನಾಗಿ ನಾವು ಕಾಣಬೇಕು. ಇಲ್ಲವಾದಲ್ಲಿ ಅಜ್ಞಾನದ ಪ್ರಭುತ್ವಕ್ಕೆ ಸಿಲುಕಬೇಕಾಗುತ್ತದೆ. ಬಸವಣ್ಣನವರ ಆದರ್ಶಗಳನ್ನು ಅಪ್ಪಿಕೊಂಡಾಗ ಮಾತ್ರ ಸಾಂಸ್ಕೃತಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಅಜ್ಞಾನ ತುಂಬಿದ ನಾಡಿನಲ್ಲಿ ವೈಚಾರಿಕತೆ, ವಾಸ್ತವ ಸಂಗತಿಗಳನ್ನು ಪರಿಚಯಿಸಿ, ದಯವೇ ಧರ್ಮದ ಮೂಲವಯ್ಯ ಎಂದ ಬಸವಣ್ಣ ಕಾಯಕ ಸಿದ್ಧಾಂತವನ್ನು ಪ್ರತಿಪಾದಿಸುವ ಮೂಲಕ ಜನರಿಗೆ ಕಾಯಕದ ಮಹತ್ವ ತಿಳಿಸಿದರು ಎಂದರು. ಇಂದು ಅಂಬೇಡ್ಕರ್ ಬರೆದ ಸಂವಿಧಾನ ೧೨ನೇ ಶತಮಾನದಲ್ಲಿ ಬಸವಣ್ಣನವರ ತಮ್ಮ ಅನುಭವ ಮಂಟಪದಲ್ಲಿ ಅನುಸರಿಸಿದ್ದರು. ಈಗ ಅದರಡಿಯಲ್ಲಿ ಎಲ್ಲವೂ ನಡೆಯುತ್ತಿದೆ. ಮಹಿಳೆಯರಿಗೂ ಹೆಚ್ಚು ಸ್ಥಾನ ಮಾನ ದೊರಕುತ್ತಿವೆ ಎಂದರು.
ಇಂದಿನ ಯುವ ಜನತೆ ದುಶ್ಚಟಗಳಿಂದ ದೂರವಿದ್ದು ಬಸವಣ್ಣನವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದು ಕರೆ ನೀಡಿದರು.
ಆಂಬ್ಲಿ ದೊಡ್ಡಭರಮಪ್ಪ ಪ್ರಥಮ ದರ್ಜೆ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ.ಕೋಟ್ರೇಶ್ವರ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಾಚಾರ್ಯ ಡಾ. ಸಿದ್ಧಲಿಂಗ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ ಅಧ್ಯಕ್ಷ ಡಾ. ಕೆ. ರವೀಂದ್ರನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕ ಅಧ್ಯಕ್ಷ ಮಾವಿನಹಳ್ಳಿ ಎಸ್. ಬಸವರಾಜ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷ ಉದಯಶಂಕರ ಮಾಗಾನಹಳ್ಳಿ, ಪತ್ರಕರ್ತ ಪಿ. ಕರಿಬಸಪ್ಪ, ಕಾಲೇಜು ಐಕ್ಯೂಎಸಿ ಸಂಚಾಲಕ ಡಾ. ಜಿ.ವೈ. ಗೋವರ್ಧನ ಯಾದವ್, ಎನ್‌ಎಸ್‌ಎಸ್ ಅಧಿಕಾರಿ ರಾಜಶೇಖರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ರಾಜಶೇಖರ, ಅಕ್ಕಿ ಮಲ್ಲಿಕಾರ್ಜುನ, ಅಡಿವಿಹಳ್ಳಿ ಪೂಜಾರ ಬಸವರಾಜ, ಬಾಗಳಿ ಶಿವಕುಮಾರ, ಗುಡಿಹಳ್ಳಿ ಹಾಲೇಶ, ಸೇರಿದಂತೆ ಇತರರು ಇದ್ದರು.