ಲಾಠಿ ಚಾರ್ಜ್ ಖಂಡಿಸಿ ಹಾವೇರಿಯಲ್ಲಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ

| Published : Dec 13 2024, 12:47 AM IST

ಸಾರಾಂಶ

ಬೆಳಗಾವಿಯಲ್ಲಿ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದಿಂದ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಲಾಠಿ ಚಾರ್ಜ್ ನಡೆಸಿರುವುದನ್ನು ವಿರೋಧಿಸಿ ಹಾಗೂ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪಂಚಮಸಾಲಿ ಸಮಾಜದ ಬಾಂಧವರು ಗುರುವಾರ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಹಾವೇರಿ: ಬೆಳಗಾವಿಯಲ್ಲಿ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದಿಂದ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಲಾಠಿ ಚಾರ್ಜ್ ನಡೆಸಿರುವುದನ್ನು ವಿರೋಧಿಸಿ ಹಾಗೂ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪಂಚಮಸಾಲಿ ಸಮಾಜದ ಬಾಂಧವರು ಗುರುವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕೂಡಲಸಂಗಮ ಪೀಠದ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಹಾಲಪ್ಪನವರ ಮಾತನಾಡಿ, ಬೆಳಗಾವಿಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮೀಸಲಾತಿ ನೀಡುವಂತೆ ಶಾಂತಿಯುತ ಹೋರಾಟ ನಡೆಸುತ್ತಿದ್ದ ವೇಳೆ ಪ್ರತಿಭಟನೆ ಹತ್ತಿಕ್ಕುವ ಉದ್ದೇಶದಿಂದ ಸಮಾಜದ ಬಾಂಧವರ ಮೇಲೆ ಪೊಲೀಸರು ದೌರ್ಜನ್ಯ ಹಾಗೂ ಲಾಠಿ ಚಾರ್ಜ್ ಮಾಡಿರುವುದು ಇಡೀ ಸಮಾಜಕ್ಕೆ ಅಪಾರ ನೋವಾಗಿದೆ. ಪಂಚಮಸಾಲಿ ಸಮಾಜ ಬಾಂಧವರು ಸಾತ್ವಿಕರು. ಸರ್ಕಾರಕ್ಕೆ ಕೆಟ್ಟ ಹೆಸರು ತರಲಿಕ್ಕೆ ಬಂದವರಲ್ಲ. ನ್ಯಾಯಯತ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲು ಬಂದವರು. ಅಂತಹವರ ಮೇಲೆ ಲಾಠಿ ಚಾರ್ಜ್ ನಡೆಸಿರುವುದು ಖಂಡನೀಯ ಎಂದರು.

ಬೆಳಗಾವಿಯಲ್ಲಿ ಮಂಗಳವಾರ ನಡೆದ ಹೋರಾಟದ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಕಲ್ಲು ತೂರುವ ಮೂಲಕ ಹೋರಾಟದ ದಿಕ್ಕು ತಪ್ಪಿಸುವ ಮತ್ತು ಸಮಾಜಕ್ಕೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಿದ್ದಾರೆ. ಸರ್ಕಾರ ಇಡೀ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಮಾಜಕ್ಕೆ ಎದುರಾದ ಕಪ್ಪುಚುಕ್ಕೆ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

ಘಟನೆಯಲ್ಲಿ ಅಮಾಯಕರ ಮೇಲೆ ಹಲ್ಲೆ ಮಾಡಿ ಬಂಧಿಸಿ ಪ್ರಕರಣ ದಾಖಲಿಸಿರುವ ಸರ್ಕಾರದ ಕ್ರಮ ಪ್ರಜಾತಂತ್ರ ವಿರೋಧಿಯಾಗಿದೆ. ಮುಖ್ಯಮಂತ್ರಿಗಳು ಪಂಚಮಸಾಲಿ ಸಮಾಜದ ಮನವಿಗೆ ಸ್ಪಂದಿಸದೇ ಪ್ರತಿಭಟನೆಯನ್ನು ವಿಫಲಗೊಳಿಸುವ ಪ್ರಯತ್ನ ಮಾಡಿ ಸಮಾಜಕ್ಕೆ ಅನ್ಯಾಯ ಎಸಗಿದೆ ಎಂದು ದೂರಿದರು.

ತಾಲೂಕಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಪಂಚಮಸಾಲಿ ಸಮಾಜ ಮೀಸಲಾತಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದು, ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದೇ ಅನ್ಯಾಯ ಎಸಗುತ್ತಿದೆ. ಪ್ರತಿಭಟನೆ ವೇಳೆ ಪೊಲೀಸರ ಮೂಲಕ ಸರ್ಕಾರ ಲಾಠಿ ಚಾರ್ಜ್ ಮಾಡಿಸಿ ಹೋರಾಟ ಹತ್ತಿಕ್ಕಲು ಮುಂದಾಗಿದ್ದು ಖಂಡನೀಯ. ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಹೋರಾಟಗಾರರ ವಿರುದ್ಧ ಎಲ್ಲ ಪ್ರಕರಣ ರದ್ದುಪಡಿಸಬೇಕು. ಸರ್ಕಾರವೇ ಗಾಯಾಳುಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಬೇಕು. ಮುಂದೆ ಈ ರೀತಿಯಲ್ಲಿ ಎಲ್ಲಿಯೂ ಆಗದಂತೆ ಸರ್ಕಾರ ಜಾಗ್ರತೆ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಪಿ.ಡಿ. ಶಿರೂರ, ಮಲ್ಲಿಕಾರ್ಜುನ ಹಾವೇರಿ, ನಿಂಗಪ್ಪ ಪೂಜಾರ, ಶಂಕರ ಬಿಸರಳ್ಳಿ, ನಂಜುಂಡೇಶ ಕಳ್ಳೇರ, ನಾಗೇಂದ್ರ ಕಟಕೋಳ, ಮಲ್ಲಿಕಾರ್ಜುನ ಸಾತೇನಹಳ್ಳಿ, ಜಗದೀಶ ಕನವಳ್ಳಿ, ಡಾ. ಬಸವರಾಜ ವೀರಾಪುರ, ಎಸ್.ಬಿ. ಇಟಗಿ, ರಾಜಶೇಖರ ಹಲಸೂರ, ಗಿರೀಶ ಗುಮಕಾರ, ಶಿವಯೋಗಿ ಸಣಮನಿ, ಪ್ರಕಾಶ ಉಚನಿಕೊಪ್ಪ, ಫಕ್ಕೀರಗೌಡ ಪಾಟೀಲ, ಶರಣಪ್ಪ ಸೂರದ, ಮಲ್ಲಿಕಾರ್ಜುನ ಅಗಡಿ, ಈಶ್ವರಗೌಡ ಪಾಟೀಲ, ಜಯರಾಜ ದೇಸಳ್ಳಿ, ರಮೇಶ ಮಲ್ಲಾಪುರ ಇತರರು ಇದ್ದರು.