ಭತ್ತ, ರಾಗಿ ಖರೀದಿ ಪ್ರಕ್ರಿಯೆ ಆರಂಭ ಹೆಸರು ನೋಂದಾಯಿಸಲು ರೈತರಿಗೆ ಮನವಿ

| Published : Dec 13 2024, 12:47 AM IST

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ರೈತರಿಂದ 2024-24 ನೇ ಸಾಲಿನ ಭತ್ತ ಮತ್ತು ರಾಗಿ ಖರೀದಿ ಪ್ರಕ್ರಿಯೆ ಆರಂಭಿಸಿದ್ದು, ಖರೀದಿ ಕೇಂದ್ರದ ಮೂಲಕ ಭತ್ತ ಮತ್ತು ರಾಗಿ ಮಾರಾಟ ಮಾಡ ಬಯಸುವ ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ರೈತರಿಂದ 2024-24 ನೇ ಸಾಲಿನ ಭತ್ತ ಮತ್ತು ರಾಗಿ ಖರೀದಿ ಪ್ರಕ್ರಿಯೆ ಆರಂಭಿಸಿದ್ದು, ಖರೀದಿ ಕೇಂದ್ರದ ಮೂಲಕ ಭತ್ತ ಮತ್ತು ರಾಗಿ ಮಾರಾಟ ಮಾಡ ಬಯಸುವ ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನಲ್ಲಿ ಈಗಾಗಲೇ ಭತ್ತ ಮತ್ತು ರಾಗಿ ಖರೀದಿ ಪ್ರಕ್ರಿಯೆ ಆರಂಭಗೊಂಡಿದೆ. 2025ರ ಮಾ.31ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ. ಪಟ್ಟಣದ ಎಪಿಎಂಸಿ ಹಾಗೂ ತಾಲೂಕಿನ ಕಿಕ್ಕೇರಿ, ಬೂಕನಕೆರೆ, ಅಕ್ಕಿಹೆಬ್ಬಾಳು, ತೆಂಡೇಕೆರೆ ಮತ್ತು ಸಂತೇಬಾಚಹಳ್ಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ನಡೆಯುತ್ತಿದೆ.

ಪಟ್ಟಣದ ಎಪಿಎಂಸಿ ಮತ್ತು ರಾಜ್ಯ ಉಗ್ರಾಣ ನಿಗಮ ಹಾಗೂ ಕಿಕ್ಕೇರಿ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 2300 ರು, ಎ.ಗ್ರೇಡ್ ಭತ್ತಕ್ಕೆ 2320 ರು. ಮತ್ತು ರಾಗಿಗೆ ಪ್ರತಿ ಕ್ವಿಂಟಲ್‌ಗೆ 4299 ರು. ಬೆಲೆ ನಿಗಧಿಪಡಿಸಲಾಗಿದೆ.

ಖರೀದಿ ಕೇಂದ್ರದ ಮೂಲಕ ಭತ್ತ ಮತ್ತು ರಾಗಿ ಮಾರಾಟ ಮಾಡುವ ರೈತರು ಗುರುತಿನ ಚೀಟಿ, ಆಧಾರ್ ಕಾರ್ಡ್, ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡಿದ NPCI ACTIVATE ಆಗಿರುವ ಬ್ಯಾಂಕ್ ಅಕೌಂಟ್ ದಾಖಲಾತಿ ನೀಡಬೇಕು. ರೈತರಿಂದ ಪ್ರತಿ ಎಕರೆಗೆ ಭತ್ತ 25 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್ ವರೆಗೆ ಮಾತ್ರ ಖರೀದಿಸಲಾಗುವುದು. ಅದರಂತೆ ರಾಗಿಯನ್ನು ಪ್ರತಿ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 20 ಕ್ವಿಂಟಲ್ ವರೆಗೆ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬೆಳೆಯ ವಿವರಗಳನ್ನು ಆಧರಿಸಿ ನೋಂದಣಿ ಕಾರ್ಯ ಮತ್ತು ಖರೀದಿ ಕಾರ್ಯ ಮಾಡಲಾಗುತ್ತದೆ. ಆದ್ದರಿಂದ ರೈತರು ಸಂಬಂಧಪಟ್ಟ ಸರ್ವೇ ನಂಬರಿಗೆ ಬೆಳೆ ಸಮೀಕ್ಷೆಯಲ್ಲಿ ಬೆಳೆ ಜೋಡಣೆಯಾಗಿರುವ ಬಗ್ಗೆ ಪರಿಶೀಲಿಸಿ ತಿದ್ದುಪಡಿಗಳಿದ್ದರೆ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಸೂಚಿಸಿದ್ದು ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕರು, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ, ಪಾಂಡವಪುರ - ಇವರನ್ನು ಸಂಪರ್ಕಿಸಲು ಕೋರಿದ್ದಾರೆ.

ಭತ್ತ ರಾಗಿ ಖರೀದಿಗೆ ದರ ನಿಗದಿ

ಮಂಡ್ಯ:

ಜಿಲ್ಲೆಯ ರೈತರಿಗೆ ಸರ್ಕಾರದ ಆದೇಶದಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಲು ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಲ್ ನಂತೆ ಗರಿಷ್ಠ 20 ಕ್ವಿಂಟಲ್ ನಂತೆ ಖರೀದಿ ಮಾಡಲು ಸೂಚನೆ ನಿಗದಿಪಡಿಸಲಾಗಿದೆ.

ಭತ್ತ-ಸಾಮಾನ್ಯ 2300 ರು. ಪ್ರತಿ ಕ್ವಿಂಟಲ್ ಗೆ, ಭತ್ತ ಗ್ರೇಡ್-ಎ 2320 ರು. ಪ್ರತಿ ಕ್ವಿಂಟಾಲ್ ಗೆ, ರಾಗಿ 4290 ರು. ಪ್ರತಿ ಕ್ವಿಂಟಲ್ ಗೆ ಅದರಂತೆ ಜಿಲ್ಲೆಯಲ್ಲಿ ಭತ್ತ ಮತ್ತು ರಾಗಿ ಖರೀದಿಸುವ ಸಂಬಂಧ ಜಿಲ್ಲೆಯ ಎಲ್ಲಾ ತಾಲೂಕುಗಳ ಕೇಂದ್ರಗಳಲ್ಲಿ ಎಂ ಎಸ್ ಪಿ ನೋಂದಣಿ ಕೇಂದ್ರ ತೆರೆಯಲಾಗಿದೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಣಿಯಾಗಲು ಅಗತ್ಯ ದಾಖಲಾತಿಗಳಾದ ಆಧಾರ್ ಕಾರ್ಡ್ ಪ್ರತಿ, ಫ್ರೋಟ್ ಐ.ಡಿ, ಆಧಾರ್ ಕಾರ್ಡ್ ಜೋಡಣೆ ಮಾಡಿರುವ ಮತ್ತು ಎನ್ ಪಿ ಸಿ ಐ ಆಕ್ಟಿವೆಟ್ ಆಗಿರುವ ಬ್ಯಾಂಕ್ ಅಕೌಂಟ್ ಪ್ರತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.