ಗಾಣಿಗ ಸಮುದಾಯಕ್ಕೆ 2ಎ ಪ್ರಮಾಣಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

| Published : Sep 15 2024, 01:55 AM IST

ಗಾಣಿಗ ಸಮುದಾಯಕ್ಕೆ 2ಎ ಪ್ರಮಾಣಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಉಚ್ಚ ನ್ಯಾಯಾಲಯಗಳ ಆದೇಶದನ್ವಯ ಈವರೆಗೆ ಗಾಣಿಗ ಸಮುದಾಯದವರಿಗೆ 2ಎ ಪ್ರಮಾಣಪತ್ರವನ್ನು ನೀಡಲಾಗಿದೆ.

ಕೂಡ್ಲಿಗಿ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಗಾಣಿಗ ಸಮುದಾಯಕ್ಕೆ ಪ್ರವರ್ಗ 2ಎ ಪ್ರಮಾಣಪತ್ರವನ್ನು ನೀಡುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಗಾಣಿಗರ ಸಂಘ ಹಾಗೂ ಕೂಡ್ಲಿಗಿ ತಾಲೂಕು ಘಟಕದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.ಪಟ್ಟಣದ ಮಹಾತ್ಮಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಿಂದ ಆರಂಭಗೊಂಡ ಪ್ರತಿಭಟನೆಯು ಮುಖ್ಯರಸ್ತೆಯ ಮೂಲಕ ಡಾ.ಅಂಬೇಡ್ಕರ್ ವೃತ್ತದಿಂದ ತಾಲೂಕು ಆಡಳಿತ ಸೌಧದ ಬಳಿಗೆ ಆಗಮಿಸಿ ಗಾಣಿಗ ಸಮುದಾಯವು ಹಿಂದುಳಿದ ವರ್ಗದ 2ಎ ಪ್ರಮಾಣ ಪತ್ರ ಪಡೆಯುವುದು ನಮ್ಮ ಹಕ್ಕು ಎಂದು ಘೋಷಣೆ ಕೂಗಿದರು.

ಗಾಣಿಗರ ಸಂಘದ ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಸಂಘದ ಅಧ್ಯಕ್ಷ ಜಿ.ಉಮೇಶ್ ಮಾತನಾಡಿ, ಜಾತಿ ಆಧರಿತ ಮೀಸಲು ಇಲ್ಲದ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಲಿಂಗಾಯತ ಗಾಣಿಗ ಎಂದು ಸೇರಿಸಿದ್ದರೂ, ಮೂಲತಃ ಎಣ್ಣೆ ಗಾಣದ ವೃತ್ತಿ ಮಾಡುತ್ತಿರುವ ಗಾಣಿಗ ಸಮುದಾಯ ಅತ್ಯಂತ ಹಿಂದುಳಿದ ವರ್ಗವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಉಚ್ಚ ನ್ಯಾಯಾಲಯಗಳ ಆದೇಶದನ್ವಯ ಈವರೆಗೆ ಗಾಣಿಗ ಸಮುದಾಯದವರಿಗೆ 2ಎ ಪ್ರಮಾಣಪತ್ರವನ್ನು ನೀಡಲಾಗಿದೆ. ಗಾಣಿಗ ಜಾತಿಯವರು 2ಎ ಪ್ರಮಾಣ ಪತ್ರ ಪಡೆಯಲು ಯಾವುದೇ ಸುಳ್ಳು ದಾಖಲೆಗಳನ್ನು ನೀಡುತ್ತಿಲ್ಲ ಹಾಗೂ ಮತ್ತೊಂದು ಜಾತಿಯ ಹಕ್ಕುಗಳನ್ನು ಕಸಿಯುತ್ತಿಲ್ಲ. ಗಾಣಿಗ ಸಮುದಾಯವು 2ಎ ಪ್ರಮಾಣ ಪತ್ರ ಪಡೆಯುವುದು ಹಕ್ಕಾಗಿದೆ. ಸರಕಾರದ ಸುತ್ತೋಲೆ ಮತ್ತು ನ್ಯಾಯಾಲಯಗಳ ಆದೇಶಗಳನ್ನು ಪರಿಗಣಿಸಿ ಅರ್ಜಿ ಸಲ್ಲಿಸಿದ ಗಾಣಿಗ ಸಮುದಾಯವರಿಗೆ ಹಿಂದುಳಿದ ವರ್ಗದ 2ಎ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ಚಂದ್ರಶೇಖರ್ ಅವರು ಮನವಿ ಸ್ವೀಕರಿಸಿ, ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗಾಣಿಗರ ಸಂಘದ ತಾಲೂಕು ಅಧ್ಯಕ್ಷ ಎಸ್.ಶೇಖರಪ್ಪ, ಮುಖಂಡರಾದ ಜರ್ಮಲಿ ಧನಂಜಯ, ದಿನ್ನೆ ಮಲ್ಲಿಕಾರ್ಜುನ, ಹಾರಕಬಾವಿ ಕೊಟ್ರೇಶ್, ಜರ್ಮಲಿ ಶಶಿಧರ, ಬಣವಿಕಲ್ಲು ಕೆ.ನಾಗರಾಜ, ಹುರುಳಿಹಾಳ್ ಬಸವೇಶ, ಕಾನಹೊಸಹಳ್ಳಿ ಕೊಟ್ರಪ್ಪ ಮೇಷ್ರ್ರು, ಕಾನಮಡುಗು ಎಂಜಿನಿಯರ್ ಶರಣಪ್ಪ, ಆಲೂರು ಕೆ.ಮಲ್ಲಿಕಾರ್ಜುನ, ಹುಲಿಕೆರೆ ಗೋನೂರು ಸ್ವಾಮಿ, ನಿಂಬಳಗೆರೆ ವಿಜಯಕುಮಾರ್, ಹುಡೇಂ ಪಿ.ಮಂಜುನಾಥ, ತುಡಮರ ಗುರುರಾಜ್, ಹೊಸಪೇಟೆ ಮಲ್ಲಿಕಾರ್ಜುನ ಕುರುಡಿ, ಹಡಗಲಿ ಕಿರಣ್ ರಾಜುವಾಳ, ಹರಪನಹಳ್ಳಿ ವಾಸುದೇವ, ಹಗರಿಬೊಮ್ಮನಹಳ್ಳಿ ಕಿನ್ನಾಳ್ ಸುಭಾಷ್ ಸೇರಿ ತಾಲೂಕಿನ ಹಲವು ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ಗಾಣಿಗ ಸಮಾಜದವರು ಹಾಜರಿದ್ದರು.

ಕೂಡ್ಲಿಗಿ ತಾಲೂಕು ತಹಶೀಲ್ದಾರ್ ಕಚೇರಿಯ ಮುಂದೆ ಕರ್ನಾಟಕ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲಾ ಮತ್ತು ತಾಲೂಕು ಗಾಣಿಗರ ಸಂಘದಿಂದ 2ಎ ಜಾತಿಪ್ರಮಾಣ ಪತ್ರ ನೀಡುವಂತೆ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕಚೇರಿಗೆ ಮುಖಂಡರು ಮನವಿ ಸಲ್ಲಿಸಿದರು.