ಸಾರಾಂಶ
ಬಿಜೆಪಿ ಐಟಿ ಸೆಲ್ ಜನರ ದಿಕ್ಕು ತಪ್ಪಿಸುತ್ತಿದೆ । ಅಮೆರಿಕಾದಲ್ಲಿ ರಾಹುಲ್ ಗಾಂಧಿ ಹೇಳಿಕೆ ತಿರುಚಲಾಗುತ್ತಿದೆ
--- ನೆಹರೂ ಮೀಸಲಾತಿ ವಿರೋಧಿಸಿದ್ದರೆಂದು ಬಿಜೆಪಿ ಅಪಪ್ರಚಾರ
- 1998 ರಲ್ಲಿ ಎಸ್.ಸಿ-ಎಸ್.ಟಿಗೆ ಶೇ 20 ರಷ್ಟು ಮೀಸಲಾತಿ- ವಾಜಪೇಯಿ ಪ್ರಧಾನಿಯಾಗಿದ್ದಾಗ ಮೀಸಲಾತಿ ಪರಿಷ್ಕರಣೆಗೆ ಪ್ರಸ್ತಾಪ
--ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ರಾಹುಲ್ ಗಾಂಧಿ ಅವರು ಅಮೆರಿಕಾ ಪ್ರವಾಸದಲ್ಲಿದ್ದಾಗ ಮೀಸಲಾತಿ ರದ್ದತಿ ವಿಚಾರ ಹೇಳಿದ್ದಾರೆ ಎಂದು ಬಿಜೆಪಿ ಗೊಂದಲ ಸೃಷ್ಠಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ದೂರಿದರು.ಶನಿವಾರ ಬಿ.ಎಚ್.ಕೈಮರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಐಟಿ ಸೆಲ್ ಜನರ ದಿಕ್ಕು ತಪ್ಪಿಸುತ್ತಿದೆ. ಅಮೆರಿಕಾ ದಲ್ಲಿ ರಾಹುಲ್ ಗಾಂಧಿ ಮೀಸಲಾತಿ ವಿಚಾರದಲ್ಲಿ ಹೇಳಿರುವುದನ್ನು ತಿರುಚಿ ತದ್ವಿರುದ್ಧವಾಗಿ ಬಿಂಬಿಸಲಾಗುತ್ತಿದೆ. ನೆಹರೂ ಅವರು ಮೀಸಲಾತಿಗೆ ವಿರುದ್ಧವಾಗಿದ್ದರು ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಇತಿಹಾಸ ತಿರುಚುತ್ತಿದ್ದಾರೆ. ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದೆ ಜನರಲ್ಲಿ ತಪ್ಪು ಸಂದೇಶ ನೀಡುತ್ತಿದ್ದಾರೆ. ಇತಿಹಾಸ ಬಲ್ಲವನು ಮಾತ್ರ ಇತಿಹಾಸ ಸೃಷ್ಟಿಸಬಲ್ಲರು ಎಂದರು.
ನೆಹರೂ ಅವರು ಪ್ರಧಾನಿಯಾಗಿದ್ದಾಗ ಅಂಬೇಡ್ಕರ್ ಸಂವಿಧಾನವನ್ನು ಒಪ್ಪಿದ್ದರು. ಪ್ರತಿಯೊಬ್ಬ ಪ್ರಜೆಗೂ ಸಮಾನವಾದ ಅವಕಾಶ ಸಿಗಬೇಕು ಎಂಬುದು ನೆಹರೂ ಅವರ ನಿಲುವಾಗಿತ್ತು. ಶಿಕ್ಷಣದಲ್ಲೂ ಮೀಸಲಾತಿ ತಂದಿದ್ದರು. ಸೋನಿಯಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮೇಲೆ ದೇಶದಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ತಂದಿದ್ದರು.ರಾಜ್ಯಸಭೆಯಲ್ಲೂ ಮಸೂದೆ ಪಾಸಾಗಿತ್ತು. ಆ ಸಂದರ್ಭದಲ್ಲಿ ನಾನು ರಾಜ್ಯಸಭಾ ಸದಸ್ಯನಾಗಿದ್ದೆ ಎಂದರು.1998 ರಲ್ಲಿ ಎಸ್.ಸಿ ಹಾಗೂ ಎಸ್.ಟಿ ಅವರಿಗೆ ಶೇ 20 ರಷ್ಟು ಮೀಸಲಾತಿ ತರಲಾಗಿತ್ತು. ರಾಹುಲ್ ಗಾಂಧಿ ಅವರು 10 ಸಾವಿರ ಕೆ.ಪಿ. ಜೋಡೋ ಪಾದಯಾತ್ರೆ ನಡೆಸಿ ಶೇ 50 ರಿಂದ 75 ರಷ್ಟು ಮೀಸಲಾತಿ ತಂದು ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದರು. ಆದರೆ, ಬಿಜೆಪಿಯ ರಾಮಜೋಯಿಸ್ ಎಂಬುವರು ಮೀಸಲಾತಿ ಕಡಿಮೆ ಮಾಡಬೇಕು ಎಂದು ನ್ಯಾಯಾಲಯದ ಮೆಟ್ಟಲೇರಿದ್ದರು. ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್, ಸುದರ್ಶನ್ ಮೀಸಲಾತಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಸಂವಿಧಾನ ಬದಲಾಯಿಸುವ ಮಾತನಾಡಿದ್ದಾರೆ ಎಂದರು.
ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಮೀಸಲಾತಿ ಪರಿಷ್ಕರಣೆ ಮಾಡಬೇಕು ಎಂದು ಪ್ರಸ್ತಾಪ ಮಾಡಿದ್ದರು. ಇದೇ ಆರ್.ಎಸ್. ಎಸ್ ನವರು 1947 ಆಗಸ್ಟ್ ನಲ್ಲಿ ತ್ರಿವರ್ಣ ದ್ವಜ ಅಶುಭ ಎಂದು ಹೇಳಿ ತಮ್ಮ ಕಚೇರಿ ಮೇಲೆ ರಾಷ್ಟ್ರ ದ್ವಜ ಹಾರಿಸಲಿಲ್ಲ. ನಂತರ 52 ವರ್ಷಗಳ ಕಾಲ ತಮ್ಮ ಕಚೇರಿ ಮೇಲೆ ರಾಷ್ಟ್ರ ಧ್ವಜ ಹಾರಿಸುತ್ತಿರಲಿಲ್ಲ. ಈಗ ರಾಹುಲ್ ಗಾಂಧಿ ಹೇಳಿಕೆಯನ್ನು ಸಂಪೂರ್ಣವಾಗಿ ತಿರುಚಿ ಬಿಜೆಪಿಯವರಜ ಪ್ರತಿಭಟನೆ ನಡೆಸಿ ಗೊಂದಲ ಸೃಷ್ಠಿಸುತ್ತಿದ್ದಾರೆ.ಇದನ್ನು ನಾನು ಖಂಡಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಗುಬ್ಬಿಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷ ಶಂಕರ್, ಕಾಂಗ್ರೆಸ್ ಪಕ್ಷದ ಮುಖಂಡ ಶಿವಣ್ಣ ಇದ್ದರು.