ಹೊರಗುತ್ತಿಗೆ ನೌಕರರ ಸೇವಾಭದ್ರತೆ ಹಾಗೂ ಮೂಲಭೂತ ಹಕ್ಕುಗಳಿಗಾಗಿ 2026ರ ಮಾರ್ಚ್ 23ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದ್ದು, ಇದರ ಪೂರ್ವಭಾವಿಯಾಗಿ ಡಿಸಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘ ವತಿಯಿಂದ ಸಾಂಕೇತಿಕ ಹೋರಾಟವನ್ನು ನಡೆಸಿ ಮನವಿ ಸಲ್ಲಿಸಲಾಯಿತು. ಈ ವೇಳೆ ಎಎಪಿ ಪಕ್ಷ ಕೂಡ ಬೆಂಬಲ ನೀಡಿತು.

ಕನ್ನಡಪ್ರಭ ವಾರ್ತೆ ಹಾಸನ

ಹೊರಗುತ್ತಿಗೆ ನೌಕರರ ಸೇವಾಭದ್ರತೆ ಹಾಗೂ ಮೂಲಭೂತ ಹಕ್ಕುಗಳಿಗಾಗಿ 2026ರ ಮಾರ್ಚ್ 23ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದ್ದು, ಇದರ ಪೂರ್ವಭಾವಿಯಾಗಿ ಡಿಸಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘ ವತಿಯಿಂದ ಸಾಂಕೇತಿಕ ಹೋರಾಟವನ್ನು ನಡೆಸಿ ಮನವಿ ಸಲ್ಲಿಸಲಾಯಿತು. ಈ ವೇಳೆ ಎಎಪಿ ಪಕ್ಷ ಕೂಡ ಬೆಂಬಲ ನೀಡಿತು. ಇದೇ ವೇಳೆ ಎಎಪಿ ಪಕ್ಷದ ಮುಖಂಡ ಅಗಿಲೆ ಯೋಗೀಶ್ ಮತ್ತು ಸಂಘದ ಅಧ್ಯಕ್ಷ ವಿಕಾಸ್ ಗೌಡ ಮಾತನಾಡಿ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆಯುಷ್ ಇಲಾಖೆಗಳ ಸಂಯೋಜಿತವಾಗಿ ರಾಜ್ಯಾದ್ಯಂತ ಸುಮಾರು 25 ಸಾವಿರಕ್ಕೂ ಅಧಿಕ ಹೊರಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದು, ಬಹುತೇಕ ನೌಕರರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು. ಸರ್ಕಾರವು ಹೊರಗುತ್ತಿಗೆ ನೌಕರರ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದರಿಂದ ನೌಕರರಲ್ಲಿ ಗೊಂದಲ ಉಂಟಾಗಿದ್ದು, ಕೆಲಸ ಕಳೆದುಕೊಳ್ಳುವ ಭೀತಿ ಹೆಚ್ಚಾಗಿದೆ ಎಂದು ಆರೋಪಿಸಿದರು.ರಾಜ್ಯಾದ್ಯಂತ ಅನಿರ್ದಿಷ್ಟವಧಿ ಮುಷ್ಕರವನ್ನು ಮಾರ್ಚ್ 23ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾಡಲು ರಾಜ್ಯ ಸಂಘವು ನಿರ್ಧರಿಸಿದ್ದು, ಈ ಹಿನ್ನೆಲೆ ದಿನಾಂಕ ಬುಧವಾರ ಸಾಂಕೇತಿಕವಾಗಿ ಹಾಸನ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉದ್ದೇಶವನ್ನು ತಿಳಿಸಿದರು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಸಕ್ರಮಗೊಳಿಸಿ ಖಾಯಂ ಮಾಡಬೇಕು, ನೇರ ಪಾವತಿ ವ್ಯವಸ್ಥೆ ಜಾರಿಗೆ ತರಬೇಕು, ಸೇವಾಭದ್ರತೆ ಒದಗಿಸಬೇಕು ಹಾಗೂ ಇಂದಿನ ಜೀವನಮಟ್ಟಕ್ಕೆ ಅನುಗುಣವಾಗಿ ಕನಿಷ್ಠ ವೇತನ ಹೆಚ್ಚಳ ಮಾಡಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಗಳಾಗಿವೆ.

ಸರ್ಕಾರ ಹೊರಗುತ್ತಿಗೆ ನೌಕರರ ವಿಚಾರದಲ್ಲಿ ದ್ವಂದ್ವ ನಿಲುವು ತೊರೆದು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ತುರ್ತ ಸೇವೆಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು ಎಂದು ಸಂಘದಿಂದ ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ವಿಕಾಸ್ ಗೌಡ, ಕಾರ್ಯದರ್ಶಿ ರಾಚಯ್ಯ, ಖಜಾಂಚಿ ಲೋಕೇಶ್, ಉಪಾಧ್ಯಕ್ಷ ಮಂಜೂಳಾ, ಕುಮಾರ್ ಇತರರು ಉಪಸ್ಥಿತರಿದ್ದರು.