ಸಾರಾಂಶ
ಕಳೆದ ಏಳೆಂಟು ತಿಂಗಳಿಂದ ವೇತನವಾಗದೇ ಹೊರಗುತ್ತಿಗೆ ನೌಕರರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ಅಸಮಾಧಾನ
ಕನ್ನಡಪ್ರಭ ವಾರ್ತೆ ಕಲಬುರಗಿ
ಬಾಕಿ ವೇತನ ಪಾವತಿಸಲು ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಸ್ ಪಡೆಯಬೇಕು. ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದ ಮುಂದೆ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯರು ಪ್ರತಿಭಟಿಸಿದರು.ಜಿಲ್ಲೆಯಲ್ಲಿರುವ ವರ್ಗಗಳ ಹಿಂದುಳಿದ ಇಲಾಖೆ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡಿರುವುದರಿಂದ 2ರಿಂದ 3 ಅಡುಗೆ ಸಿಬ್ಬಂದಿ ನೇಮಕ ಮಾಡಲಾಗಿತ್ತು. ಸರ್ಕಾರ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿದ್ದಾರೆ ಎಂದು ಆರೋಪಿಸಿ ₹4.50 ಕೋಟಿ ಪಾವತಿ ಮಾಡಿಲ್ಲ. ಇದರಿಂದ ಕಳೆದ ಏಳೆಂಟು ತಿಂಗಳಿಂದ ವೇತನವಾಗದೇ ಹೊರಗುತ್ತಿಗೆ ನೌಕರರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಸಿಬ್ಬಂದಿ ಕಡಿತ ಮಾಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡಿರುವುದು ಸರಿಯಲ್ಲ. ಆದೇಶವನ್ನು ಬೇಗ ಹಿಂಪಡೆಯಬೇಕು. 50 ವಿದ್ಯಾರ್ಥಿಗಳಿಗೆ ಮೂರು ಜನ ಅಡುಗೆ ಸಿಬ್ಬಂದಿ ನೇಮಕ ಮಾಡಬೇಕು. ರಾತ್ರಿ ಕಾವಲುಗಾರರನ್ನು ನೇಮಿಸಬೇಕು. ಕಾಯಂ ನೌಕರರ ಸ್ಥಳಗಳಲ್ಲಿ ಮಾತ್ರ ಕಾಯಂ ನೌಕರರ ನೇಮಕ ಮಾಡಬೇಕು. ಹೊರಗುತ್ತಿಗೆ ನೌಕರರಿಗೆ 8 ಗಂಟೆ ಮಾತ್ರ ಕೆಲಸ ನೀಡಬೇಕು. ಬಾಕಿ ವೇತನ ಪಾವತಿ ಮಾಡಬೇಕು. ಕನಿಷ್ಠ ವೇತನ ಜಾರಿ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ಹಡಗಲಿ, ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಬಂಡೆ, ಬಾಬು ಹೊಸಮನಿ, ರವಿಚಂದ್ರ ಯರಗೋಳ, ನಾಗರಾಜ ಕಟ್ಟಿಮನಿ ಪಾಲ್ಗೊಂಡಿದ್ದರು.