ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ

| Published : Nov 22 2025, 03:00 AM IST

ಸಾರಾಂಶ

ತಡೆಗೋಡೆ ನಿರ್ಮಿಸಿಕೊಡುವಂತೆ ತಾಲೂಕು ಆಡಳಿತ ಸೌಧದ ಮುಂದೆ ಜನರು ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ಚೌಡ್ಲು ಗ್ರಾಮದ ಎರಡನೇ ವಾರ್ಡಿನಲ್ಲಿ ಸುಮಾರು 150 ಕುಟುಂಬಗಳು ವಾಸಿಸುತ್ತಿದ್ದು ಇದರಲ್ಲಿ 25 ಕುಟುಂಬಗಳ ಮನೆಯ ಹಿಂಭಾಗ ಬರೆ ಕುಸಿಯುತ್ತಿದೆ, ಇದಕ್ಕೆ ತಡೆಗೋಡೆ ನಿರ್ಮಿಸಿಕೊಡುವಂತೆ ತಾಲೂಕು ಆಡಳಿತ ಸೌಧದ ಮುಂದೆ ಅಲ್ಲಿನ ಜನರು ಸೋಮವಾರ ಪ್ರತಿಭಟಿಸಿದರು.ಇಲ್ಲಿನ ಜನರು ಬಹುತೇಕ ಕೂಲಿ ಕಾರ್ಮಿಕರು, ಕಳೆದ ಆರು ತಿಂಗಳಿಂದ ನಮಗೆ ಅತಿ ಹೆಚ್ಚು ಮಳೆಯಾಗಿದೆ. ಮಳೆಯ ಸಂದರ್ಭ ಬರೆ ಕುಸಿಯುವ ಭೀತಿಯಿಂದ ಜೀವ ಕೈಯಲ್ಲಿ ಹಿಡಿದು ಭಯ ಭೀತರಾಗಿ ಬದುಕಿದ್ದೇವೆ. ಮಳೆಯಲ್ಲಿ 25ಕ್ಕೂ ಹೆಚ್ಚು ಕುಟುಂಬಗಳ ಮನೆಗೆ ಹಾನಿಗಳಾಗಿದೆ. ಹಲವು ಭಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ, ಇಲ್ಲಿಯವರೆಗೆ ಯಾರು ಸಹಾ ತಿರುಗಿ ನೋಡಿಲ್ಲ ಎಂದು ತಹಸೀಲ್ದಾರ್ ಮುಂದೆ ಅಲ್ಲಿನ ಜನರು ಅಳಲು ತೋಡಿಕೊಂಡರು.ಈ ಸಂದರ್ಭ ಅಲ್ಲಿನ ವಾರ್ಡ್ ಸದಸ್ಯರಾದ ಸುರೇಶ್ ಶೆಟ್ಟಿ ಮಾತನಾಡಿ ತಹಸೀಲ್ದಾರ್ ರವರು ಖುದ್ದು ಸ್ಥಳ ಪರಿಶೀಲನೆ ಮಾಡಬೇಕು. ಅಲ್ಲಿನ ಜನರು ಬರೆ ಕುಸಿಯುವ ಭೀತಿಯಿಂದ ಊರು ತೊರೆಯುತ್ತಿದ್ದಾರೆ. ಅಧಿಕಾರಿಗಳು ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಈ ಸಮಸ್ಯೆಗೆ ಆದಷ್ಟು ಬೇಗ ಸ್ಪಂದಿಸದೆ ಇದ್ದಲ್ಲಿ ತಾಲೂಕು ಕಚೇರಿ ಎದುರು ಅಹೋರಾತ್ರಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ನಂತರ ಗ್ರಾಮದವರೆಲ್ಲ ಸೇರಿ ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರಿಗೆ ಮನವಿ ಪತ್ರ ನೀಡಿದರು. ಈ ಸಂದರ್ಭ ಗ್ರಾಮದವರಾದ ಪ್ರವೀಣ್. ಗಣೇಶ. ಫ್ರಾನ್ಸಿಸ್, ಅನಿಲ್, ರಮೇಶ್ ಇದ್ದರು.