ಪದ್ಯಾಣ ಶಂಕರನಾರಾಯಣ ಭಟ್‌ ‘ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ’ ಪ್ರದಾನ ಡಿ.9ರಂದು

| Published : Nov 22 2025, 03:00 AM IST

ಪದ್ಯಾಣ ಶಂಕರನಾರಾಯಣ ಭಟ್‌ ‘ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ’ ಪ್ರದಾನ ಡಿ.9ರಂದು
Share this Article
  • FB
  • TW
  • Linkdin
  • Email

ಸಾರಾಂಶ

ತೆಂಕುತಿಟ್ಟು ಯಕ್ಷರಂಗದ ಹಿರಿಯ ಮೇರು ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್ ಅವರನ್ನು 2025ನೇ ಸಾಲಿನ ಪ್ರತಿಷ್ಠಿತ ‘ಶ್ರೀ ಹರಿಲೀಲಾ ಯಕ್ಷನಾದ ಪುರಸ್ಕಾರ’ಕ್ಕೆ ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆತೆಂಕುತಿಟ್ಟು ಯಕ್ಷರಂಗದ ಹಿರಿಯ ಮೇರು ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್ ಅವರನ್ನು 2025ನೇ ಸಾಲಿನ ಪ್ರತಿಷ್ಠಿತ ‘ಶ್ರೀ ಹರಿಲೀಲಾ ಯಕ್ಷನಾದ ಪುರಸ್ಕಾರ’ಕ್ಕೆ ಆಯ್ಕೆ ಮಾಡಲಾಗಿದೆ.

ಯಕ್ಷಗಾನದ ಗುರು ದಂಪತಿ ಲೀಲಾವತಿ ಬೈಪಾಡಿತ್ತಾಯ ಮತ್ತು ಹರಿನಾರಾಯಣ ಬೈಪಾಡಿತ್ತಾಯ ಅವರ ಹೆಸರಿನಲ್ಲಿ ಡಿಜಿ ಯಕ್ಷ ಫೌಂಡೇಶನ್ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಡಿಜಿ ಯಕ್ಷಗಾನ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭ ಡಿ.9ರಂದು ಅಲಂಗಾರು ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆಯಲಿದೆ. ಈ ಸಂದರ್ಭ ಯಕ್ಷಗಾನದ ಪ್ರಥಮ ಮಹಿಳಾ ಭಾಗವತರಾದ ದಿ.ಲೀಲಾವತಿ ಬೈಪಾಡಿತ್ತಾಯರ ಪ್ರಥಮ ವರ್ಷದ ಸಂಸ್ಮರಣೆಯೂ ಜರುಗಲಿದೆ ಎಂದರು. ಪ್ರಶಸ್ತಿ ಪ್ರದಾನ ಸಮಾರಂಭದ ಜೊತೆಗೆ ವಿವಿಧ ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.ಅಂದು ಬೆಳಗ್ಗೆ ಬೈಪಾಡಿತ್ತಾಯರ ಶಿಷ್ಯರು ಮತ್ತು ಅತಿಥಿ ಕಲಾವಿದರಿಂದ ಲೀಲಾ ಅವರಿಗೆ ಯಕ್ಷಗಾನಾರ್ಚನೆ ನಡೆಯಲಿದೆ. ಮಧ್ಯಾಹ್ನ 3.15ರಿಂದ ಬೈಪಾಡಿತ್ತಾಯ ಶಿಷ್ಯವೃಂದದಿಂದ ಚೆಂಡೆಗಳ ಜುಗಲ್ಬಂದಿ ‘ಅಬ್ಬರತಾಳ’, ಸಂಜೆ ಲೀಲಾ ಬೈಪಾಡಿತ್ತಾಯರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ, ಸಂಪೂರ್ಣ ಮಹಿಳೆಯರೇ ಇರುವ ಶ್ರೀಶ ಕಲಿಕಾ ಕೇಂದ್ರ, ತಲಕಳ ಕಲಾವಿದರಿಂದ ‘ದಕ್ಷ ಯಜ್ಞ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಆಲಂಗಾರು ದೇವಸ್ಥಾನದ ಪ್ರಧಾನ ಆರ್ಚಕರಾದ ವೇದಮೂರ್ತಿ ಈಶ್ವರ ಭಟ್ ಅವರು ದೀಪಪ್ರಜ್ವಲನೆ ಮಾಡಲಿದ್ದು, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ. ಹಿರಿಯ ವಿದ್ವಾಂಸ ಪ್ರೊ.ಎಂ.ಎಲ್.ಸಾಮಗ ಅವರು ಲೀಲಾ ಬೈಪಾಡಿತ್ತಾಯರ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಪ್ರಸಿದ್ಧ ಕಲಾವಿದ ವಾಸುದೇವ ರಂಗಾಭಟ್ ಮಧೂರು ಪದ್ಯಾಣ ಶಂಕರನಾರಾಯಣ ಭಟ್ ಅವರನ್ನು ಅಭಿನಂದಿಸಲಿದ್ದಾರೆ. ಉದ್ಯಮಿ ಶ್ರೀಪತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.