ಪಾಂಡವಪುರ ತಾಲೂಕಿನ ಬನಘಟ್ಟ ಬಳಿಯ ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಹೊಸ ಸೇತುವೆಯನ್ನು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿ ಜ.19ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬನಘಟ್ಟ ಬಳಿಯ ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಹೊಸ ಸೇತುವೆಯನ್ನು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿ ಜ.19ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಎಚ್ಚರಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬನಘಟ್ಟ ಬಳಿಯ ವಿಶ್ವೇಶ್ವರಯ್ಯ ನಾಲೆ ಹಳೆ ಸೇತುವೆ ಕಿರಿದಾಗಿ ಅಪಘಾತ ಸಂಭವಿಸಿ ಸಾಕಷ್ಟು ಸಾವು-ನೋವುಗಳು ಉಂಟಾಗಿದ್ದ ಹಿನ್ನೆಲೆಯಲ್ಲಿ ಕಳೆದ 3 ವರ್ಷಗಳ ಹಿಂದೆ ಹಳೆ ಸೇತುವೆ ಪಕ್ಕದಲ್ಲಿಯೇ ಹೊಸದಾಗಿ ದೊಡ್ಡ ಸೇತುವೆ ನಿರ್ಮಿಸಲಾಗಿದೆ ಎಂದರು.
ಹೊಸ ಸೇತುವೆ ನಿರ್ಮಾಣದಿಂದ ಸಾರ್ವಜನಿಕರಿಗೆ ರಸ್ತೆ ಸಂಚಾರ ಸುಗಮವಾಗುತ್ತದೆ. ಆದರೆ, ಈವರೆಗೂ ಸೇತುವೆ ಉದ್ಫಾಟನೆಯಾಗಿಲ್ಲ. ಹೀಗಾಗಿ ಸೇತುವೆಯನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಲವು ಬಾರಿ ಸ್ಥಳೀಯ ಗ್ರಾಮಸ್ಥರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರೂ ಎಂಜಿನಿಯರ್‌ಗಳು ಸೇತುವೆ ಉದ್ಫಾಟನೆಯ ಸುಳ್ಳು ಭರವಸೆ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಜ.19ರಿಂದ ನಿರಂತರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.ಪಟ್ಟಣದಿಂದ ಕೆ.ಆರ್.ಎಸ್ ಮಾರ್ಗವಾಗಿ ತೆರಳುವ ಬಿಬಿ-ಬಿಟಿ ರಸ್ತೆಯಲ್ಲಿ ಪುರಸಭೆ ಪಂಪ್ ಹೌಸ್ ಎದುರು ಮೂರು ಕಡೆ ಗುಂಡಿ ಬಿದ್ದಿದೆ. ಇದರಿಂದಾಗಿ ಕಳೆದ 15 ದಿನಗಳ ಹಿಂದೆ ವಾಹನ ಸವಾರರೊಬ್ಬರು ಸಾವನ್ನಪ್ಪಿದರು. ಅಧಿಕಾರಿಗಳು ಕೂಡಲೇ ಗುಂಡಿ ಮುಚ್ಚಿಸಿ, ವಿದ್ಯುತ್ ದೀಪಗಳನ್ನು ಅಳವಡಿಸಿ ಜನರ ಪ್ರಾಣ ಉಳಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಸಬ್ ರಿಜಿಸ್ಟರ್ ಕಚೇರಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಿಂಗಳಿಗೆ ಸರ್ಕಾರವು 40 ಸಾವಿರ ರು. ಬಾಡಿಗೆ ಪಾವತಿಸುತ್ತಿದೆ. ಹೀಗಾಗಿ ಕಚೇರಿಯನ್ನು ಈ ಹಿಂದಿನ ಹಳೆ ಎ.ಸಿ.ಕಚೇರಿ ಕಟ್ಟಡಕ್ಕೆ ಸ್ವಳಾಂತರ ಮಾಡಿ ಸರ್ಕಾರ ಹಣ ವ್ಯರ್ಥವಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.ಭ್ರಷ್ಟಾಚಾರದದ ಆರೋಪದ ಮೇಲೆ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಆದರೆ, ಆಡಳಿತಾಧಿಕಾರಿಗಳಾದ ಎಸಿ ಕೆ.ಆರ್.ಶ್ರೀನಿವಾಸ್ ಈವರೆಗೂ ಕ್ರಮ ಜರುಗಿಸಿಲ್ಲ ಎಂದು ದೂರಿದರು.
ತಾಲೂಕು ಕಚೇರಿಗೆ ರೈತರ ಅಲೆದಾಟ ತಪ್ಪಿಲ್ಲ. ಪ್ರತಿಯೊಂದು ಕೆಲಸಕ್ಕೂ ಅಧಿಕಾರಿಗಳು ಹಣಕ್ಕಾಗಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಪ್ರತಿಭಟಿಸಿ ಅಧಿಕಾರಿಗಳ ಅಮಾನತ್ತಿಗೆ ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಹಿರೇಮರಳಿ ಡೇರಿ ಅಧ್ಯಕ್ಷ ಮಲ್ಲಿಕ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಬಿ.ಚಲುವೇಗೌಡ (ಬಕೋಡಿ), ಗ್ರಾಪಂ ಉಪಾಧ್ಯಕ್ಷ ಮನು, ಮಾಜಿ ಉಪಾಧ್ಯಕ್ಷ ಕೆ.ಸಿ.ಕುಮಾರಸ್ವಾಮಿ, ಮುಖಂಡರಾದ ಬೇವಿನಕುಪ್ಪೆ ರಾಮಕೃಷ್ಣೇಗೌಡ, ಕೆಂಚನಹಳ್ಳಿ ತಿಮ್ಮೇಗೌಡ, ಜಗಣ್ಣ, ಬನಘಟ್ಟ ಅಶ್ವತ್ಥ್ ಇತರರು ಇದ್ದರು.