ಮದ್ಯದ ಅಮಲಿನಲ್ಲಿದ್ದ ಚಾಲಕನೊಬ್ಬ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಹೋಟೆಲ್‌ ಗೋಡೆಗೆ ಅಪ್ಪಳಿಸಿದ ಭೀಕರ ಘಟನೆಯಲ್ಲಿ ಯುವಕನೊಬ್ಬ ಗಾಯಗೊಂಡಿದ್ದು, ಎರಡು ವಾಹನಗಳು ಜಖಂಗೊಂಡಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮದ್ಯದ ಅಮಲಿನಲ್ಲಿದ್ದ ಚಾಲಕನೊಬ್ಬ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಹೋಟೆಲ್‌ ಗೋಡೆಗೆ ಅಪ್ಪಳಿಸಿದ ಭೀಕರ ಘಟನೆಯಲ್ಲಿ ಯುವಕನೊಬ್ಬ ಗಾಯಗೊಂಡಿದ್ದು, ಎರಡು ವಾಹನಗಳು ಜಖಂಗೊಂಡಿವೆ.

ಇಂದಿರಾನಗರದ 100 ಅಡಿಯ ರಸ್ತೆಯಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಈ ಭೀಕರ ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಸಂಬಂಧ ಖಾಸಗಿ ಹೋಟೆಲ್‌ನ ಸಿಬ್ಬಂದಿ ಲಾಲ್‌ ಮೊಹಮ್ಮದ್‌ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಜೀವನ್‌ ಭೀಮಾ ನಗರ ಸಂಚಾರ ಠಾಣೆಯ ಪೊಲೀಸರು ದೊಮ್ಮಲೂರು ನಿವಾಸಿಯಾಗಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ ಡೇರಿಕ್ ಟೋನಿ (42) ಮತ್ತು ಈತನ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾರ್ಟಿಯಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದ ಚಾಲಕ ಮದ್ಯದ ಅಮಲಿನಲ್ಲಿ ಎಡಕ್ಕೆ ತಿರುಗಿಸದೇ ನೇರವಾಗಿ ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಮೇಲಕ್ಕೆ ಹಾರಿ ಮುಂದೆ ಇದ್ದ ಹೋಟೆಲ್‌ಗೆ ಡಿಕ್ಕಿ ಹೊಡೆದಿದ್ದಾನೆ. ಊಟ ಮಾಡಿಕೊಂಡು ಹೋಟೆಲ್ ಹೊರಗೆ ನಿಂತಿದ್ದ ಐದು ಮಂದಿ ಯುವಕ-ಯುವತಿಯರ ತಂಡ, ಕಾರ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಶಬ್ದ ಕೇಳಿ ಎಚ್ಚೆತ್ತು ಕೂಡಲೇ ಸ್ಥಳದಿಂದ ಓಡಿ ಹೋಗಿ ಪಾರಾಗಿದ್ದಾರೆ.

ಈ ಸಂಬಂಧ ಜೀವನ್ ಭೀಮಾ‌ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಾಲಕ ಮದ್ಯ ಸೇವಿಸಿರುವುದು ದೃಢಪಟ್ಟಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.