ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಪರಿಶಿಷ್ಟ ಜಾತಿಯ ಬಲಗೈನವರು ಜಾತಿ ಗಣತಿಯಲ್ಲಿ ಹೊಲೆಯ ಎಂತಲೇ ತಮ್ಮ ಜಾತಿಯನ್ನು ನಮೂದಿಸಿ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು.ಅವರು ತಾಲೂಕಿನ ಚಂಗಚಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 134ನೇ ಅಂಬೇಡ್ಕರ್ ಜಯಂತಿ, ಡಾ.ಬಿ.ಆರ್. ಅಂಬೇಡ್ಕರ್ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಪರಿಶಿಷ್ಟ ಜಾತಿಯ ಆಂತರಿಕ ಸಮೀಕ್ಷೆ ನಡೆಯುತ್ತಿದೆ. ಈ ಸಮೀಕ್ಷೆಯಲ್ಲಿ ಮಾಹಿತಿದಾರರು ಬಂದಾಗ ಇದರಲ್ಲಿ ಅನೇಕ ಕಾಲಂಗಳಿರುತ್ತವೆ. ಇವರಿಗೆ ನಿಖರ ಮಾಹಿತಿ ನೀಡಬೇಕು. ಜಾತಿ ಕಲಂನಲ್ಲಿ ನಮ್ಮವರು ಹೊಲೆಯ ಎಂತಲೇ ನಮೂದಿಸಬೇಕು. ಸಮೀಕ್ಷೆದಾರರಿಗೆ ಯಾವುದೇ ಗೊಂದಲಗಳಿಗೂ ಆಸ್ಪದ ನೀಡಬಾರದು. ಇದರಿಂದ ನಮ್ಮ ಜಾತಿಯ ಸಂಖ್ಯೆಯ ನಿಖರ ಮಾಹಿತಿ ಲಭಿಸುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಮೀಸಲಿನಲ್ಲಿ ಅನ್ಯಾಯವಾಗುವುದಿಲ್ಲ ಎಂದರು. ಅಲ್ಲದೆ ಈ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಮುಂದಿನ ಶಾಸಕರ ನಿಧಿಯಲ್ಲಿ 25 ಲಕ್ಷ ರು. ಅನುದಾನ ನೀಡಲಾಗುವುದು. ಇಲ್ಲಿಗೆ ಸಮರ್ಪಕ ರಸ್ತೆ ನಿರ್ಮಾಣವಾದಾಗ ಕೆಎಸ್ಸಾರ್ಟಿಸಿ ಬಸ್ ಸಂಪರ್ಕ ಕೊಡಿಸಲಾಗುವುದು. ಬಸ್ ನಿಲ್ದಾಣ ಹಾಗೂ ಚರಂಡಿ ಕಾಮಗಾರಿಗೆ ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು ಎಂದರು. ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ನಮ್ಮ ದೇಶದ ಇತಿಹಾಸದಲ್ಲಿ 657 ಸಂಸ್ಥಾನಗಳು, 1 ಸಾವಿರ ವರ್ಷ ಪರಕೀಯರು ಆಳ್ವಿಕೆ ಮಾಡಿದ್ದಾರೆ. ಎಲ್ಲರೂ ಕೂಡ ನಮ್ಮ ಸಮುದಾಯವನ್ನು ನಿಕೃಷ್ಟವಾಗಿ ನಡೆಸಿಕೊಂಡು ಬಂದಿದ್ದಾರೆ. ನಮ್ಮ ವಿಮೋಚಕರಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಹುಟ್ಟಿ ಬಂದರು. ಅವರು ನಮಗೆ ಸಮಾನ ಅವಕಾಶ ನೀಡಿದರು. ಆದರೆ ನಮ್ಮ ಸಂಘಟನೆ ಹೋರಾಟಗಳಲ್ಲಿ ಧೈರ್ಯ ಕಾಣುತ್ತಿಲ್ಲ. ನಮ್ಮ ರಾಜಕೀಯ ಶಕ್ತಿ ಇನ್ನೂ ನೋವಿನಲ್ಲಿದೆ. ಜಾತಿ ಕೂಪದಲ್ಲಿ ದೇಶ ಇನ್ನೂ ಇದೆ. ನಾವು ಶಿಕ್ಷಣ ಕೈಗಾರಿಕೆ, ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಸಾಧನೆ ಸಾಧಿಸಬೇಕು. ಬ್ರಾಹ್ಮಣ ಸಂಸ್ಕೃತಿಯನ್ನು ಧಿಕ್ಕರಿಸುವ ಕಾರ್ಯಕ್ರಮಗಳು ನಡೆಯಬೇಕು. ಬುದ್ಧನೆಡೆಗೆ ನಾವು ಸಾಗಬೇಕು. ಪಂಚಶೀಲಗಳ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಅರುಳ್‌ಕುಮಾರ್ ಮಾತನಾಡಿ, ಅಂಬೇಡ್ಕರ್ ಸಂವಿಧಾನದ ಚರ್ಚೆಯಲ್ಲಿ ಭಾಗವಹಿಸಿ 3895 ಪ್ರಶ್ನೆಗಳಿಗೆ ಉತ್ತರ ಸಮರ್ಥ ಉತ್ತರ ನೀಡಿ ಇದನ್ನು ಜಾರಿಗೆ ತಂದಿದ್ದಾರೆ. ಇದನ್ನು ಉಳಿಸಿಕೊಳ್ಳುವ ನೈತಿಕ ಹೊಣೆ ನಮ್ಮ ಮೇಲಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಲಿಕೆಗೆ ಮಾತ್ರ ಮೀಸಲಿಡಬೇಕು. ಆರ್ಥಿಕತೆಯನ್ನು ತಿಳಿದುಕೊಳ್ಳಬೇಕು. ತಾಂತ್ರಿಕ ವಿಷಯಗಳ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಎಐ ತಂತ್ರಜ್ಞಾನದ ಕಲಿಕೆಯನ್ನು ಕಲಿಯಬೇಕು ಎಂದು ಸಲಹೆ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮದ ಸಾಧಕರನ್ನು ಸನ್ಮಾನಿಸಲಾಯಿತು. ನಿವೃತ್ತ ತಹಸೀಲ್ದಾರ್ ಸಿ. ಮಹಾದೇವಯ್ಯ, ಪ್ರಾಂಶುಪಾಲ ಎಸ್. ವಿಷಕಂಠಮೂರ್ತಿ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಅಂಬಳೆ ಗ್ರಾಪಂ ಅಧ್ಯಕ್ಷ ಎಲ್. ನವೀನ್, ಗ್ರಾಪಂ ಸದಸ್ಯೆ ರಾಣಿಲಿಂಗರಾಜು, ಆರ್. ಮಹದೇವ್, ರಾಜಶೇಖರ್, ರವಿ, ಮಹದೇವಸ್ವಾಮಿ ಶಿವನಂಜೇಗೌಡ, ಸಿ.ಸ್ವಾಮಿ, ಜಿ. ಶಿವಣ್ಣ, ಸಿ. ರಮೇಶ್‌ಕುಮಾರ್, ಪಿ. ಮಧು, ಸಿ. ನಾಗರಾಜು, ಶಿವಕುಮಾರ್, ಯೋಗೇಂದ್ರ, ವಿ. ಶ್ರೀನಿವಾಸ್, ಮಹದೇವಯ್ಯ ಇದ್ದರು.
-----------೧೧ವೈಎಲ್‌ಡಿ ಚಿತ್ರ೦೧ ಯಳಂದೂರು ತಾಲೂಕಿನ ಚಂಗಚಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ರಮವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಉದ್ಘಾಟಿಸಿದರು. ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ ಅನೇಕರು ಇದ್ದರು.